Thu 15 Feb 2018, 7:41AM

468X60

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ ಕೆಲವೊಮ್ಮೆ ಅದಕ್ಕಿಂತಲೂ ಹೆಚ್ಚು ಪುಟಗಳಿಂದ ಜನರ ಮನೆ ಬಾಗಿಲಿಗೆ ತಲುಪುತ್ತಿರುವುದು ಸಮುದಾಯ ಪತ್ರಿಕೋದ್ಯಮದಲ್ಲೊಂದು ಕ್ರಾಂತಿ.ಎಂಬಿಬಿಎಸ್ ವೈದ್ಯರೊಬ್ಬರ ಹೋರಾಟದ ಫಲವಾಗಿ ಪುತ್ತೂರಿನಲ್ಲಿ ಸುದ್ದಿಬಿಡುಗಡೆ ದಿನಪತ್ರಿಕೆಯಾಗಿ, ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ವಾರಪತ್ರಿಕೆಯಾಗಿ ಹೊರಬರುತ್ತಿದೆ. ಇವು ಕೇವಲ ತಾಲೂಕು ಮಟ್ಟದ ಪತ್ರಿಕೆ. ತಾಲೂಕು ಮತ್ತು ತಾಲೂಕಿನವರಾಗಿದ್ದು ಜಗತ್ತಿನಾದ್ಯಂತ ಇರುವ ಮಂದಿಯ ಸುದ್ದಿ, ಮಾಹಿತಿ ಪತ್ರಿಕೆಯ ವ್ಯಾಪ್ತಿ ಎನ್ನುತ್ತಾರೆ ಡಾ.ಯು.ಪಿ.ಶಿವಾನಂದ. ಆದರೆ, ಯಾವುದೇ ರಾಜ್ಯ ಮಟ್ಟದ ಪತ್ರಿಕೆಗಿಂತ ಹೆಚ್ಚಿನ ಪ್ರಸಾರವನ್ನು ಆಯಾಯ ತಾಲೂಕುಗಳಲ್ಲಿ ಹೊಂದಿದೆ ಎನ್ನುವುದು ಗಮನಾರ್ಹ.ಊರು, ಪರವೂರು, ದೇಶ ವಿದೇಶಗಳ ಸುದ್ದಿಯೊಂದಿಗೆ, ನಮ್ಮ ದಿನ ನಿತ್ಯದ ಬಳಕೆಗೆ ಬೇಕಾದ ಅತ್ಯವಶ್ಯಕ ಮಾಹಿತಿಯನ್ನು ನೀಡುತ್ತಿರುವ ಪತ್ರಿಕೆ ಇದಾಗಿದೆ. ಶಿಕ್ಷಣದಿಂದ ಹಿಡಿದು ಪ್ರವಾಸೋದ್ಯಮ, ಕೃಷಿ, ವಾಣಿಜ್ಯ ಇತ್ಯಾದಿ ಎಲ್ಲ ಕ್ಷೇತ್ರಗಳ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಸುದ್ದಿ ಪ್ರಮುಖ ಪಾತ್ರ ವಹಿಸುತ್ತಿದೆ. ಯಾವುದೇ ಪ್ರದೇಶದ ಸಮಗ್ರ ಬೆಳವಣಿಗೆಯಲ್ಲಿ ‘ಮಾಹಿತಿ’ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದು ಸುದ್ದಿ ಸಮೂಹದ ನಂಬಿಕೆ.

ಸುದ್ದಿ ಬಿಡುಗಡೆ ನಡೆದು ಬಂದ ದಾರಿ 

 ಸುದ್ದಿ ಆರಂಭ :
1985 ರಲ್ಲಿ ಸುಳ್ಯದ ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಂಬಿಬಿಎಸ್ ಓದಿದ ವೈದ್ಯರೊಬ್ಬರು ಗ್ರಾಹಕರ ವೇದಿಕೆಯ ಮೂಲಕ ಹಚ್ಚಿದ ಹೋರಾಟದ ಕಿಡಿ ಬಳಿಕ ಕರಪತ್ರದ ಮೂಲಕ ಜನಮೆಚ್ಚುಗೆ ಪಡೆದಾಗ ಹೋರಾಟಕ್ಕೆ ತೋರಿದ ಮುಂದಿನ ದಿಕ್ಕು ಇಂದಿನ ಸುದ್ದಿ ಪತ್ರಿಕೆ. ಅಂದು ಸುಳ್ಯದಲ್ಲಿ ತಮ್ಮ ಸ್ವಂತ ವಾಹನ ಮತ್ತು ಸ್ವಂತ ಖರ್ಚಿನಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಜನಬೆಂಬಲ ಪಡೆದು ಡಾ. ಯು.ಪಿ ಶಿವಾನಂದ ಅವರು ಪತ್ರಿಕೆಯನ್ನು ಮುನ್ನೆಡೆಸಿದರು.
ಎರಡನೇ ಹಂತವಾಗಿ 1986 ರಲ್ಲಿ ಬೆಳ್ತಂಗಡಿಯಲ್ಲಿ ಸುದ್ದಿ ಪತ್ರಿಕೆ ಆರಂಭಿಸಿದರು. ಈ ಎರಡೂ ಕಡೆಗಳಲ್ಲಿ ವಾರ ಪತ್ರಿಕೆಯಾಗಿ ಆರಂಭವಾದ ಸುದ್ದಿ ಎರಡೂ ಕಡೆಗಳಲ್ಲಿ ಯಶಸ್ಸು ಕಂಡಿತು. ಮುಂದಿನ ಹಂತವಾಗಿ ಸೆ.4, 1987ರಲ್ಲಿ ಪುತ್ತೂರಲ್ಲಿ ಸುದ್ದಿ ದಿನ ಪತ್ರಿಕೆಯಾಗಿ ಆರಂಭಗೊಂಡಿತು. ಕಪ್ಪು ಬಿಳುಪಿನಲ್ಲಿ ಆರಂಭವಾದ ಸುದ್ದಿ ಅಂದು ಕೇವಲ ಎರಡು ಪುಟಗಳಲ್ಲಿ ಇತ್ತು. ಚಿಕ್ಕ ಕ್ರೌನ್ ಸೈಜ್ ನಲ್ಲಿ ಸ್ಥಳೀಯ ಟ್ರೆಡಲ್ ಪ್ರೆಸ್ಸಿನಲ್ಲಿ ಮುದ್ರಣಗೊಳ್ಳುತ್ತಿದ್ದ ಪತ್ರಿಕೆ ಆ ನಂತರದ ದಿನಗಳಲ್ಲಿ ತನ್ನ ಗಾತ್ರ ಹಾಗೂ ಪುಟಗಳಲ್ಲಿ ಏರಿಕೆಯನ್ನು ಕಂಡುಕೊಂಡಿತು. ಅಂದಿನ ಪತ್ರಿಕೆಯ ಬೆಲೆ ಕೇವಲ 10 ಪೈಸೆಯಾಗಿತ್ತು.

ಪುತ್ತೂರು, ಮಂಗಳೂರು, ಸುಳ್ಯ, ಬೆಳ್ತಂಗಡಿ, ಕೊಡಗು ಮತ್ತು ಬೆಂಗಳೂರಿನಲ್ಲಿ ನೂರಾರು ಮಂದಿಗೆ ಖಾಯಂ ಆದಾಯದ ಉದ್ಯೋಗ ಕಲ್ಪಿಸಿರುವ ಶಿವಾನಂದ ಅವರ ಪತ್ರಿಕೆಯ ಸಾಧನೆ ಅಧ್ಯಯನಕ್ಕೆ ಅರ್ಹವಾದ ವಿಚಾರ. ಪತ್ರಿಕೋದ್ಯಮ, ಗ್ರಾಮೀಣಾಭಿವೃದ್ಧಿ ಮತ್ತು ವಾಣಿಜ್ಯ ಆಡಳಿತದ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕಾದ ಜನಪರ ಉದ್ಯಮ ಸುದ್ದಿಬಿಡುಗಡೆ ಮಾಧ್ಯಮ ಸಮೂಹ ಸಂಸ್ಥೆ.

ಯಾವುದೇ ರಾಜಕೀಯ ಸಂಘಟನೆ, ಸಿದ್ಧಾಂತಗಳಿಂದ ದೂರವಾಗಿದ್ದು ನಿಜಾರ್ಥದಲ್ಲಿ ಪತ್ರಿಕೆಯನ್ನು ನಿಷ್ಪಕ್ಷಪಾತವಾಗಿ ನಡೆಸಿಕೊಂಡು ಬರುತ್ತಿರುವುದು ಸುದ್ದಿ ಬಿಡುಗಡೆಯ ಇನ್ನೊಂದು ವೈಶಿಷ್ಟ್ಯ.

ಪತ್ರಿಕೆಯಲ್ಲೇನಿದೆ :

ಇಂದಿನ ಕ್ರೈಮ್, ಸೆಕ್ಸ್, ಕ್ರಿಕೆಟ್, ಕುಟುಂಬ ಕಲಹ ವೈಭವೀಕರಣ ಪತ್ರಿಕೋದ್ಯಮದಿಂದ ಸಂಪೂರ್ಣ ವಿಭಿನ್ನವಾಗಿ, ಜಾಹಿರಾತು ಆಧಾರಿತ ಸುದ್ದಿ ಪ್ರಕಟಣೆ ಮಾದರಿಯನ್ನು ಅನುಕರಿಸದೆ ವಿಭಿನ್ನವಾಗಿದೆ ಸುದ್ದಿಬಿಡುಗಡೆ. ಒಂದು ಪತ್ರಿಕೆ ಸಮೃದ್ಧವಾಗುವುದು ಆ ಪತ್ರಿಕೆಯಲ್ಲಿರುವ ಮಾಹಿತಿ ಮತ್ತು ಸುದ್ದಿಯಿಂದ. ಹಣ ಕೊಟ್ಟು ಪತ್ರಿಕೆ ಪಡೆಕೊಂಡ ಗ್ರಾಹಕನಿಗೆ ಆ ಪತ್ರಿಕೆಯಿಂದ ಒಂದಷ್ಟು ಲಾಭ ಸಿಗಬೇಕು ಆಗ ಮಾತ್ರ ಪತ್ರಿಕೆಯ ಉದ್ದೇಶ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಸುದ್ದಿ ಪತ್ರಿಕೆಯಲ್ಲಿ ಏನಿದೆ ಎಂದು ಕೇಳುವ ಬದಲು ಏನಿಲ್ಲ ಎಂದು ಪ್ರಶ್ನಿಸುವುದು ಲೇಸು.

ಹುಟ್ಟು ಹಬ್ಬದಿಂದ ಹಿಡಿದು ಮರಣದವರೆಗೆ, ಶುಭ ವಿವಾಹ ಫೋಟೋ ಸಮೇತ ವರದಿಗಳು, ಪ್ರಶಸ್ತಿಗಳು, ವರ್ಗಾವಣೆ ಪದೋನ್ನತಿ, ನೇಮಕ, ಪದಾಧಿಕಾರಿ ಆಯ್ಕೆ, ವಾರದಲ್ಲಿ ಎಲ್ಲೆಲ್ಲಿ ಏನೇನು ಕಾರ್ಯಕ್ರಮಗಳಿವೆ ಎಂಬುದಕ್ಕೆ ಈ ದಿನದ ಕಾರ್ಯಕ್ರಮ, ಅಧಿಕಾರಿಗಳ ಮಾಹಿತಿ, ಇಲಾಖೆಯಲ್ಲಿ ದೊರೆಯುವ ಮಾಹಿತಿ ಇತ್ಯಾದಿಗಾಗಿ ಇಲಾಖಾ ಮಾಹಿತಿ, ಜನಪ್ರತಿನಿಧಿಗಳ ವಾರದ ಕಾರ್ಯಕ್ರಮ, ಜಾಗ ಮಾರಾಟ ಖರೀದಿ ಇತ್ಯಾದಿ ಮಾಹಿತಿ, ಶೈಕ್ಷಣಿಕ ಉದ್ಯೋಗ ಮಾಹಿತಿ, ಸಾಧಕರ ಸಂದರ್ಶನ, ಪರವೂರ ಸುದ್ದಿ, ಜಿಲ್ಲೆ, ದೇಶ ವಿದೇಶ ಸುದ್ದಿಗಳು, ಮಕ್ಕಳ ಚಿತ್ರಗಳು, ಶಿಕ್ಷಣ, ಸಾಹಿತ್ಯ ಸಾಪ್ತಾಹಿಕ, ಕೃಷಿ, ವ್ಯಕ್ತಿತ್ವ ವಿಕಸನ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ವಿವಿಧ ಅನುಭವಿ ಬರಹಗಾರರ ಲೇಖನಗಳು, ಹಾಳೆತಟ್ಟೆ ಮತ್ತು ಇತರ ಕೃಷಿ ಉತ್ಪನ್ನಗಳ ಮಾರಾಟ ಮಾಹಿತಿ, ಪಾರ್ಸೆಲ್ ಸರ್ವೀಸಸ್ ಹೀಗೆ ಇನ್ನೂ ಹತ್ತು ಹಲವು ಉಪಯುಕ್ತ ಮಾಹಿತಿಗಳನ್ನು, ಸುದ್ದಿಗಳನ್ನು ಜನರಿಗೆ ತಲುಪಿಸುವಲ್ಲಿ ಸುದ್ದಿ ಪತ್ರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ.

ಶಾಸಕರು, ಉಪವಿಭಾಗದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಎಂದು ಕಚೇರಿಯಲ್ಲಿ ಇರುತ್ತಾರೆ, ಎಂದು ಇರುವುದಿಲ್ಲ ಎಂಬ ಮಾಹಿತಿ ನೀಡುವ ಮೂಲಕ ಸುದ್ದಿ ಗ್ರಾಮೀಣ ಪ್ರದೇಶದ ಜನರಿಗೆ ಬೇಕಾದ ಮಾಹಿತಿಯನ್ನು ನೀಡುತ್ತಿದೆ. ಇದರಿಂದ ಅನಗತ್ಯವಾಗಿ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ.

ಪರವೂರ ಸುದ್ದಿ :

ಸುದ್ದಿಯ ಸ್ಪಷಾಲಿಟಿ ಹಲವಿವೆ. ನಮ್ಮೂರಿನ ಜನರು ಇತರ ದೇಶಗಳಲ್ಲಿ ಮಾಡುತ್ತಿರುವ ಸಾಧನೆ, ಸಾಮಾಜಿಕ ಕಾರ್ಯಗಳು ನಮ್ಮೂರಿನ ಜನರಿಗೆ ತಿಳಿಯದಿದ್ದರೆ ಹೇಗೆ? ಅದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದು ಈ ಪರವೂರ ಸುದ್ದಿಗಳು. ಒಬ್ಬ ವ್ಯಕ್ತಿ ಯಾವುದೇ ದೇಶದಲ್ಲಿರಲಿ ಅಲ್ಲಿ ಆತ ಮಾಡಿದ ಸಾಧನೆ, ಅವನಿಗೆ ಸಿಕ್ಕಿದ ಬಿರುದು, ಸನ್ಮಾನಗಳು ಅವನ ತಾಯ್ನಾಡಿಗೆ ತಿಳಿಯಬೇಕು ಎಂದು ಯೋಚಿಸಿ ಡಾಕ್ಟರ್ ರವರು ಪರವೂರ ಪುತ್ತೂರಿನವರು ಎಂಬ ಅಂಕಣ ಆರಂಭಿಸಿದರು. ಈ ಅಂಕಣ ಬಹಳ ಯಶಸ್ವಿಯನ್ನು ಕಾಣುತ್ತಿದೆ.

ಸುದ್ದಿ ಮಾಹಿತಿ :

ಜನರಿಗೆ ಸುದ್ದಿ, ಮಾಹಿತಿ ಮತ್ತು ಸೇವೆಯನ್ನು ನೀಡುವ ಕೆಲಸವನ್ನು ಸುದ್ದಿ ಪತ್ರಿಕೆ ಕಳೆದ 25 ವರ್ಷಗಳಿಂದ ಮಾಡುತ್ತಿದೆ. ಒಂದು ಸಮಾಜದ, ಒಬ್ಬ ವ್ಯಕ್ತಿಯ ಅಭಿವೃದ್ಧಿಯಲ್ಲಿ ಮಾಹಿತಿ ಮತ್ತು ಸೇವೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಮಾಹಿತಿಯ ಕೊರತೆಯೇ ಒಂದು ಊರಿನ ಅಭಿವೃದ್ಧಿಗೆ ತೊಡಕಾಗುತ್ತದೆ.ಪ್ರತಿಯೊಬ್ಬನಿಗೂ ಶಿಕ್ಷಣ, ಉದ್ಯೋಗ, ಆರೋಗ್ಯ ಮತ್ತು ಜಗತ್ತಿನ ಇತರೇ ಮಾಹಿತಿಗಳು ಅತ್ಯವಶ್ಯ. ಈ ಎಲ್ಲ ಸೇವೆ ಮತ್ತು ಮಾಹಿತಿಗಳನ್ನು ಪೂರೈಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಸುದ್ದಿ ಮಾಹಿತಿ ಟ್ರಸ್ಟ್ ಇಂದು ರಾಜ್ಯ ಮಟ್ಟದ ಶಿಕ್ಷಣ ಉದ್ಯೋಗ ಮಾಹಿತಿ ಎಂಬ ಪಾಕ್ಷಿಕ ಪತ್ರಿಕೆಯನ್ನು ನಡೆಸುತ್ತಿದೆ.

ಸುದ್ದಿ ಎಲ್ಲ ತರದ ಮಾಹಿತಿ ಮತ್ತು ಸೇವೆಯನ್ನು ನೀಡುವಲ್ಲಿ ತನ್ನ ಕೈಯಿಂದಾದ ಪ್ರಯತ್ನವನ್ನು ಮಾಡುತ್ತಿದೆ. ಸರಕಾರಿ, ಖಾಸಗಿ ಉದ್ಯೋಗಗಳ ಮಾಹಿತಿ, ವಿವಿಧ ಇಲಾಖೆಗಳ ಅರ್ಜಿ ನಮೂನೆಗಳು, ತಾಲೂಕಿನಲ್ಲಿರುವ ವಿವಿಧ ಕೆಲಸಗಾರರ ಉದಾಹರಣೆಗೆ: ಮರದ ಕೆಲಸಗಾರರು, ಮೇಸ್ತ್ರಿಗಳು, ಗಾರೆಯವರು, ಅಡಿಕೆ ತೆಗೆಯುವವರು, ಪೈಂಟ್ ಕೆಲಸಗಾರರು, ಕಬ್ಬಿಣದ ಕೆಲಸಗಾರರು ಇತ್ಯಾದಿ ಕೆಲಸಗಾರರ ಮಾಹಿತಿಯನ್ನು ಜನರಿಗೆ ನೀಡುತ್ತಿದೆ. ಅಲ್ಲದೆ ಹೊಯಿಗೆ, ಜಲ್ಲಿ, ಕೆಂಪು ಕಲ್ಲು, ಬೋರ್ ವೆಲ್ ಇತ್ಯಾದಿ ಸೇವೆಗಳನ್ನು ಕೂಡ ಜನರಿಗೆ ನೀಡುತ್ತಿದೆ.

ಅದಲ್ಲದೆ ಪ್ರವಾಸೋದ್ಯಮದಲ್ಲಿ ಹೊಸ ಹೆಜ್ಜೆಯನ್ನು ಇಡುತ್ತಿದೆ. ಈಗಾಗಲೇ ಇಡೀ ರಾಜ್ಯದ ಪ್ರವಾಸೋದ್ಯಮ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ನಡೆಯುತ್ತಿದೆ. ಮುಖ್ಯವಾಗಿ ತಾಲೂಕಿನ ಪ್ರವಾಸಿ ತಾಣಗಳು, ಪುಣ್ಯ ಕ್ಷೇತ್ರಗಳು, ಅಲ್ಲಿನ ಮಹತ್ವ, ಅಲ್ಲಿಯ ಪೂಜಾ ಸಮಯ ಹೀಗೆ ಎಲ್ಲಾ ವಿಧದ ಮಾಹಿತಿಗಳನ್ನು ಸಂಗ್ರಹಿಸಿ, ಜನರಿಗೆ ನೀಡುವಲ್ಲಿ ಸುದ್ದಿ ಪ್ರಮುಖ ಪಾತ್ರ ವಹಿಸುತ್ತಿದೆ. ಮಾಹಿತಿ ಹಬ್ಬಗಳನ್ನು ಮಾಡುವುದರ ಮೂಲಕ ಜನರಿಗೆ ಮಾಹಿತಿ ಮತ್ತು ಸೇವೆಯನ್ನು ನೀಡುವ ಕೆಲಸವನ್ನು ಕೂಡ ಮಾಡುತ್ತ ಬಂದಿದೆ.

ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top