Wed 22 Nov 2017, 4:34AM

ಹೆಚ್ಚಿನ ಸುದ್ದಿಗಳು

ಜಿಲ್ಲೆಯ ಎಲ್ಲಾ 8 ಕ್ಷೇತ್ರಗಳನ್ನು ಗೆಲ್ಲುವುದೇ ನಮ್ಮ ಗುರಿ ಸುಳ್ಯದಿಂದಲೇ ಜಿಲ್ಲೆಯ ಚುನಾವಣಾಪೂರ್ವ ಚಟುವಟಿಕೆಗಳಿಗೆ ಚಾಲನೆ

Thursday, July 6th, 2017 | Suddi Belthangady | no responses

Harish Kumar New Photo1ವಿಶೇಷ ಸಂದರ್ಶನ : 

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಜಿಲ್ಲೆಯ 8ಕ್ಕೆ 8 ಕ್ಷೇತ್ರ ಕೂಡ ಗೆಲ್ಲುವುದೇ ನಮ್ಮ ಗುರಿ. ಆ ನಿಟ್ಟಿನಲ್ಲಿ ನಮ್ಮ ಪಕ್ಷಕ್ಕೆ ಗೆಲುವು ದೂರವಾಗಿರುವ ಸುಳ್ಯ ವಿಧಾನ ಸಭಾ ಕ್ಷೇತ್ರದಿಂದಲೇ ಈ ಬಾರಿಯ ಚುನಾವಣಾಪೂರ್ವ ಕಾರ್ಯಚಟುವಟಿಕೆಗೆ ಚಾಲನೆ ನೀಡಲಾಗುತ್ತಿದೆ. ಜು. 15ಕ್ಕೆ ಸುಳ್ಯದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಯಲಿದ್ದು ಇದಕ್ಕೆ ಎಐಸಿಸಿ ಪ್ರ. ಕಾರ್ಯದರ್ಶಿ ವಿಷ್ಣುನಾಥನ್ ಬರುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಸುದ್ದಿ ನಡೆಸಿದ ವಿಶೇಷ ಸಂದರ್ಶನದಲ್ಲಿ ಅವರು ಹಂಚಿಕೊಂಡ ಅಭಿಪ್ರಾಯಗಳು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೀರಿ ಏನನ್ನಿಸುತ್ತದೆ?
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಎಲ್ಲರ ಒಮ್ಮತದಿಂದ ಆಯ್ಕೆಯಾಗಿದ್ದೇನೆ ಎಂಬುದೇ ಸಂತೋಷ. ಹಿಂದೆಯೂ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಈಗ ಹೆಚ್ಚಿನ ಜವಾಬ್ಧಾರಿ ಸಿಕ್ಕಿದೆ. ಹಿಂದೆ ಪಕ್ಷದ ವಿವಿಧ ಹುದ್ದೆಗಳಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷತೆಯಲ್ಲಿ ಒಂದು ಸುತ್ತಿನಲ್ಲಿ 2 ವರ್ಷ, ಇನ್ನೊಂದು ಸುತ್ತಿನಲ್ಲಿ 13-14 ವರ್ಷ ಹೀಗೆ ಒಟ್ಟು 16 ವರ್ಷಗಳ ಅನುಭವ ಹೊಂದಿದ್ದೇನೆ. ಆದ್ದರಿಂದ ಈಗಿನ ಕೆಲಸ ಕಷ್ಟವಾಗಲಿಕ್ಕಿಲ್ಲ. ಹಿಂದೆ ಜಿಲ್ಲಾ ಕಾಂಗ್ರೆಸ್ ಪ್ರ. ಕಾರ್ಯದರ್ಶಿಯಾಗಿದ್ದೆ, ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದೆ. ಜಿಲ್ಲಾ ಪರಿಷತ್ ಸದಸ್ಯನಾಗಿದ್ದೆ, ಜಿಲ್ಲೆಯ ಸಮಗ್ರ ಪರಿಚಯವಿದೆ. 38 ವರ್ಷಗಳಿಂದ ಪಕ್ಷದಲ್ಲಿದ್ದು ಕೆಲಸ ಮಾಡಿದ ಅನುಭವ ಇದೆ. ಪಕ್ಷದ ಶಾಸಕರು, ಹಿರಿಯ ಮುಖಂಡರ ಬೆಂಬಲದಿಂದ ಕೆಲಸ ಮಾಡಲಿದ್ದೇನೆ.
ಅಧ್ಯಕ್ಷ ಹುದ್ದೆ ಸಿಗುವ ಭರವಸೆ ಇತ್ತೇ?
ನಾನು ಆ ಬಗ್ಗೆ ಕೇಳಿದ್ದೂ ಇಲ್ಲ. ಆಕಾಂಕ್ಷಿಯೂ ಆಗಿರಲಿಲ್ಲ. ಶಾಸಕರ, ಹಿರಿಯರ ಸಹಕಾರದಿಂದ ಒಮ್ಮತದ ಆಯ್ಕೆ ನಡೆದುದರಿಂದ ಕೆಲಸ ಮಾಡಲು ಅನುಕೂಲವಾಗಿದೆ.
ಪಕ್ಷದಲ್ಲಿ ದೀರ್ಘ ವರ್ಷ ಕೆಲಸ ಮಾಡಿದ್ದೀರಿ. ಈಗ ಅಧಿಕಾರ ಸಿಕ್ಕಿರುವ ಬಗ್ಗೆ?
ಇದು ಅಧಿಕಾರ ಅಲ್ಲ. ಅಧಿಕಾರ ಯಾವತ್ತೂ ಮುಳ್ಳಿನ ಹಾಸಿಗೆ ಇದ್ದಂತೆ. ನನಗೆ ಸಿಕ್ಕಿದ ಅಧಿಕಾರವನ್ನು ಪಕ್ಷದಲ್ಲಿ ಹೆಚ್ಚಿನ ಕೆಲಸ ಮಾಡಲು ಸಿಕ್ಕಿದ ಅವಕಾಶ ಎಂದುಕೊಂಡಿದ್ದೇನೆ. ಹಿಂದೆ ತಾಲೂಕು ಮಟ್ಟದಲ್ಲಿ ಮಾತ್ರ ಇದ್ದ ಅವಕಾಶ ಈಗ ಜಿಲ್ಲಾ ಮಟ್ಟದಲ್ಲಿ ಸಿಕ್ಕಿದೆ. ಹೆಚ್ಚು ಜವಾಬ್ಧಾರಿಯಿಂದ ಕೆಲಸ ಮಾಡುತ್ತೇನೆ.
ನಿಮ್ಮದೇ ಸರಕಾರ ಇದೆ. ಜಿಲ್ಲೆಗೆ ಏನಾದರೂ ಸೌಲಭ್ಯಗಳನ್ನು ಹೊತ್ತುತರುತ್ತೀರಾ?
ಜಿಲ್ಲೆಗೆ ಆಗಬೇಕಾದ ಅಭಿವೃದ್ಧಿ ಕಾರ್ಯಯೋಜನೆಗಳ ಪ್ರಯತ್ನವನ್ನು 7 ಕ್ಷೇತ್ರಗಳಲ್ಲಿ ಇರುವ ನಮ್ಮ ಪಕ್ಷದ ಶಾಸಕರುಗಳು, ಮಂತ್ರಿಗಳು, ಮುಖಂಡರುಗಳು ಅವರ ಮುಖಾಂತರ ಜನರು ಬೇಡಿಕೆ ಸಲ್ಲಿಸಿ ಪೂರೈಸಿಕೊಳ್ಳುತ್ತಿದ್ದಾರೆ. ಹೆಚ್ಚುವರಿಯಾಗಿ ನನ್ನ ಗಮನಕ್ಕೆ ಏನಾದರೂ ಅಂತಹಾ ಬೇಡಿಕೆಗಳು ಬಂದಾಗ ಶಾಸಕರು, ಸಚಿವರ ವಿಶೇಷ ಗಮನಸೆಳೆದು ಅವುಗಳನ್ನು ಮಾಡಿಸಲು ತಯಾರಿದ್ದೇನೆ.
ಬಂಟ್ವಾಳ ಕ್ಷೇತ್ರದಲ್ಲಿ ಪ್ರಭಾಕರ ಭಟ್ ಅವರನ್ನು ವಿರೋಧಿಸುವ ಮೂಲಕ ರಮಾನಾಥ ರೈ ಅವರಿಂದ ಮುಸ್ಲಿಂ ಮತದಾರರ ಓಲೈಕೆ ನಡೆಯುತ್ತಿದೆ ಎಂಬ ಆರೋಪವಿದೆ?
ಇದು ಕೇವಲ ಆರೋಪ ಮಾತ್ರ. ರಮಾನಾಥ ರೈ ಅವರು ನೈಜ ಜಾತ್ಯಾತೀತ ನಿಲುವಿನ ದೇಶಪ್ರೇಮಿ ನಾಯಕ. ಜಾತ್ಯಾತೀತವಾಗಿ ಎಲ್ಲರನ್ನೂ ಎಲ್ಲ ಜನಾಂಗದವರನ್ನೂ, ಎಲ್ಲ ಕೋಮಿನವರನ್ನು ಸೌಹಾರ್ದತೆಯಿಂದ ನೋಡುವ ಇಚ್ಚೆ ಇರುವವರು. ಅವರು ಯಾವ ಕೋಮಿನ ಮತೀಯವಾದಿಗಳಿಗೂ ಬೆಂಬಲ ನೀಡುತ್ತಿಲ್ಲ. ಶಾಂತಿ ಮತ್ತು ಸರ್ವಧರ್ಮ ಸಮನ್ವಯತೆಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದ್ದರಿಂದಾಗಿಯೇ ಅವರು ಬಂಟ್ವಾಳದಲ್ಲಿ 6 ಬಾರಿ ಗೆದ್ದಿದ್ದಾರೆ. ಜಾತ್ಯಾತೀತ ನಿಲುವಿಗೆ ಮಾತ್ರ ಅವರು ಸಪೋರ್ಟ್ ಮಾಡುತ್ತಾರೆ. ಇದರಲ್ಲಿ ಓಲೈಕೆ ಪ್ರಶ್ನೆ ಬರುವುದಿಲ್ಲ.
ನೀವು ಮುಂದಕ್ಕೆ ಯಾವ ಹುದ್ದೆಯ ಮೇಲೆ ಕಣ್ಣಿಟ್ಟಿದ್ದೀರಿ?
ನಾನು ಸ್ಪರ್ಧಾಕಾಂಕ್ಷಿಯೇ ಅಲ್ಲ. ಅದನ್ನು ಹಿಂದೆಯೇ ಸ್ಪಷ್ಟಪಡಿಸಿದ್ದೇನೆ. ನನ್ನ ಅಧಿಕಾರ ಸ್ವೀಕಾರ ದಿನವೂ ಬಹಿರಂಗವಾಗಿಯೇ ಘೋಷಿಸಿದ್ದೇನೆ ಕೂಡ. ಪಕ್ಷದಲ್ಲಿ ಸಿಕ್ಕಿದ ಜವಾಬ್ಧಾರಿಯನ್ನು ಉತ್ತಮವಾಗಿ ನಿರ್ವಹಿಸುವುದಷ್ಟೇ ನನ್ನ ಕೆಲಸ. ಊಹೆಯ ವಿಚಾರಗಳಿಗೆ ಈಗ ಉತ್ತರ ನೀಡಲು ಸಾಧ್ಯವಿಲ್ಲ.
ಸರಕಾರ ಬಂದಾಗ ಅವಕಾಶಗಳು ಸೃಷ್ಠಿಯಾಗುತ್ತದಲ್ಲವೇ?
ಈಗ ಪಕ್ಷ ನನಗೆ ಏನು ಕೆಲಸ ಕೊಟ್ಟಿದೆ ಅದನ್ನು ಮಾಡುತ್ತೇನೆ. ಸರಕಾರ ಬಂದಾಗ ಪಕ್ಷದ ಹೈಕಮಾಂಡ್, ನಾಯಕರು ಆಗ ಏನು ಕೆಲಸ ಕೊಡುತ್ತಾರೋ ಆಗ ಅದನ್ನೂ ಮಾಡಲು ಸಿದ್ಧ. ಈಗ ಜಿಲ್ಲೆಯ 8 ರಲ್ಲಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಟಿಕೇಟ್ ಹಂಚಿಕೆ ವೇಳೆ ಅವರಿಗೇ ಅವಕಾಶ ಕೊಡುವುದು ಸಂಪ್ರದಾಯ. ಉಳಿದಂತೆ ಅವರ ಮೇಲೆ ಪಕ್ಷವಿರೋಧಿ ಧೋರಣೆ ಅಥವಾ ಭ್ರಷ್ಟಾಚಾರದಂತಹಾ ಗುರುತರವಾದ ಆಪಾದನೆ ಇದ್ದರೆ ಬದಲಾವಣೆ ಮಾಡಬಹುದು. ಆದ್ದರಿಂದ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ಸದ್ಯಕ್ಕೆ ನನಗೆ ಅವಕಾಶವಿಲ್ಲ. ಸುಳ್ಯದಲ್ಲಿ ಎಸ್.ಸಿ. ಮೀಸಲಾತಿ ಇದೆ. ಅಲ್ಲಿ ನನಗೆ ಆಗುವುದಿಲ್ಲ.
ಸುಳ್ಯದಲ್ಲಿ ಗೆಲ್ಲಲು ನಿಮ್ಮ ಕಾರ್ಯತಂತ್ರವೇನು?
ಸುಳ್ಯದ ಸಮಾವೇಶಕ್ಕೂ ಮುನ್ನ ಕ್ಷೇತ್ರಕ್ಕೆ ಭೇಟಿ ನೀಡಿ ಅಲ್ಲಿನ ಮುಖಂಡರುಗಳ ಜೊತೆ ಮಾತುಕತೆ ನಡೆಸಲಿದ್ದೇನೆ. ಹಿಂದಿನ ಸೋಲಿನ ಅವಲೋಕನ ನಡೆಸಲಿದ್ದೇನೆ. ಕಾರ್ಯಕರ್ತರಲ್ಲಿ ಅಭಿಪ್ರಾಯ ಪಡೆಯುತ್ತೇನೆ. ಕಾರ್ಯಕರ್ತರು ನಮ್ಮ ನಾಯಕರ ಮಧ್ಯೆ ಹೊಂದಾಣಿಕೆ ಕೊರತೆ ಇದ್ದಲ್ಲಿ ಅದನ್ನು ಗಮನಿಸುತ್ತೇನೆ. ಕಾರ್ಯಕರ್ತರು, ಮತದಾರರ ಮೂಲಕ ನಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದುಕೊಂಡು ಅದನ್ನು ಜಿಲ್ಲಾ ಸಮಿತಿಯ ಮುಂದೆ ಚರ್ಚಿಸಿ ಮುಂದಿನ ಗೆಲುವಿನ ಕಾರ್ಯತಂತ್ರ ರೂಪಿಸಲಿದ್ದೇನೆ.
ಮೀಸಲಾತಿ ಬದಲಾವಣೆಗೆ ಪ್ರಯತ್ನವೇನಾದರೂ ಮಾಡುತ್ತೀರೇ?
ಸುಳ್ಯ ಕ್ಷೇತ್ರದಲ್ಲಿ ಎಸ್.ಸಿ. ಮೀಸಲಾತಿ ಇದೆ. ಅದರ ಬದಲಾವಣೆ ಆಗುವುದಿಲ್ಲ. ಹೊಸದಾಗಿ ಕ್ಷೇತ್ರ ವಿಂಗಡಣೆಯಾಗುವ ವೇಳೆ ಆ ಕ್ಷೇತ್ರದಲ್ಲಿ ಎಸ್.ಸಿ. ಮತದಾರರೇ ಅಧಿಕ ಪ್ರಮಾಣದಲ್ಲಿರುವುದರಿಂದ ಅದು ಮತ್ತೊಮ್ಮೆ ಮೀಸಲಾಗಿದೆ. ಇನ್ನೂ 25 ವರ್ಷಗಳಲ್ಲಿ ಬದಲಾವಣೆ ಸಾಧ್ಯವಿಲ್ಲ. ಪುತ್ತೂರು ಕ್ಷೇತ್ರ ಮಹಿಳಾ ಮೀಸಲಾತಿ ಇದ್ದು, ಅದು ಬದಲಾಗಬೇಕಿದ್ದರೆ ಸಂಸತ್ ಮತ್ತು ರಾಜ್ಯಸಭೆಯಲ್ಲಿ ಮಸೂದೆ ಮಂಡನೆಯಾಗಬೇಕು. ರಾಷ್ಟ್ರಪತಿ ಅಂಕಿತ ಆಗಬೇಕು. ಅದೆಲ್ಲಾ ಆದ ಮೇಲೆ ವಿಚಾರ ಬರುತ್ತದೆ. ಈಗ ಅದರ ಬಗ್ಗೆ ಚರ್ಚೆ ಬೇಡ.
ಜಿಲ್ಲಾಧ್ಯಕ್ಷರಾಗಿ ನಿಮ್ಮ ಮುಂದಿನ ದಿನಚರಿ?
ಪ್ರತಿದಿನ ಜಿಲ್ಲಾ ಕಚೇರಿಗೆ ಬೇಟಿ. ಮತ್ತು ಎಲ್ಲಾ 8 ವಿಧಾನ ಸಭಾ ಕ್ಷೇತ್ರಗಳಿಗೆ ಪ್ರವಾಸ. ಒಟ್ಟಿನಲ್ಲಿ ಪಕ್ಷದಲ್ಲಿ ಕೆಲಸ ಮಾಡುವುದು ಇಷ್ಟ. ಪಕ್ಷದ ನೀತಿ-ನಿಯಮ, ಸಿದ್ಧಾಂತ, ಹಿರಿಯರ ಮಾರ್ಗದರ್ಶನದ ಯಾವುದೇ ಕೆಲಸ ಬೇಕಾದರೂ ಮಾಡುತ್ತೇನೆ. ಯುವಜನತೆ, ಮಹಿಳೆಯರು ಹಾಗೂ ಹಿರಿಯ ಕಿರಿಯರ, ಶಾಸಕರು ಮತ್ತು ಮಂತ್ರಿಗಳುಗಳ ಸಹಕಾರ ಪಡೆದುಕೊಂಡು, ಸರಕಾರ, ರಾಜ್ಯ ಘಟಕ, ಎಐಸಿಸಿ, ಹೈಕಮಾಂಡ್ ನಿರ್ದೇಶನದಂತೆ ಪ್ರಾಮಾಣಿಕ ಕಾರ್ಯಕರ್ತನಾಗಿ ನಿಷ್ಠೆಯಿಂದ ಕೆಲಸ ಮಾಡುತ್ತೇನೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top