Wed 22 Nov 2017, 4:36AM

ಹೆಚ್ಚಿನ ಸುದ್ದಿಗಳು

ಶೀಘ್ರದಲ್ಲೇ ಉಜಿರೆಯಲ್ಲಿ ಎಂಡೋ ಸಲ್ಫಾನ್ ಡೇಕೇರ್ ಸೆಂಟರ್

Thursday, July 13th, 2017 | Suddi Belthangady | no responses

kfd 2ಆರೋಗ್ಯ ಇಲಾಖೆಯ
ರೂ. 50ಲಕ್ಷ ಅನುದಾನದಲ್ಲಿ
ಅಂತಿಮ ಹಂತ ತಲುಪಿದ ಕಾಮಗಾರಿ

ಎಂಡೋ ಪೀಡಿತ ಮಕ್ಕಳಿಗೆ ಫಿಸಿಯೋಥೆರಪಿ, ಸ್ಪೀಚ್ ಥೆರಫಿ ವ್ಯವಸ್ಥೆ
ಮಂಗಳೂರು ಕುಲಶೇಖರ ಸಾನಿಧ್ಯಾ ಸ್ವಯಂ ಸೇವಾ ಸಂಸ್ಥೆಗೆ ಆಡಳಿತ ನಿರ್ವಹಣೆ ಹೊಣೆಗಾರಿಕೆ
ಉತ್ತಮ ಗುಣಮಟ್ಟದ ಆಹಾರ ಒದಗಣೆ, ಆಟದ ಮನೆ
ಕೌಶಲ್ಯಾಭಿವೃದ್ದಿ ತರಭೇತಿ ವಿಭಾಗ
ಮೂಲಭೂತ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ವ್ಯವಸ್ಥೆ.
ಅಗತ್ಯ ಔಷಧಿಗಳು ಮತ್ತು ನಿತ್ಯ ಪ್ರಯಾಣಕ್ಕೆ ವಾಹನ ವ್ಯವಸ್ಥೆ
ಉದ್ಘಾಟನೆಗೆ ಆರೋಗ್ಯ ಸಚಿವರು ಸಹಿತ
ಸಚಿವರುಗಳ ದಂಡು ಉಜಿರೆಗೆ
ಉಜಿರೆ ಕೆಎಫ್‌ಡಿ ಸೆಂಟರ್ ಇನ್ನೂ ಎಂಡೋ ಪಾಲನಾ ಕೇಂದ್ರ

ಎಂಡೋ ಸಲ್ಫಾನ್… ಹೀಗೆಂದ ಕೂಡಲೇ ನಿಮ್ಮ ಕಣ್ಣೆದುರಿಗೆ ಆ ಕರಾಳ ಚಿತ್ರಣಗಳು ತೆರೆದುಕೊಳ್ಳುತ್ತದೆ. ಗೇರುನೆಡುತೋಪಿಗೆ ಸರಕಾರ 1970- 80ರ ಆಸುಪಾಸಿನಲ್ಲಿ ಹೆಲಿಕಾಪ್ಟರ್ ಮೂಲಕ ವೈಮಾನಿಕವಾಗಿ ಸಿಂಪಡಿಸಿದ ಈ ಕೀಟ ನಾಶಕದ ಪರಿಣಾಮವಾಗಿ ತಾಲೂಕಿನ ಕೆಲವು ಗ್ರಾಮಗಳಲ್ಲಿ ಇಂದಿಗೂ ಮೂರ್‍ನಾಲ್ಕು ದಶಕಗಳಿಂದ ಹುಟ್ಟುವ ಪ್ರತಿ ಮಗುವಿಗೂ ಕೂಡ ವಿಕಲಾಂಗತೆ, ಕ್ಯಾನ್ಸರ್‌ನಂತಹ ಮಾರಕ ರೋಗಗಳು, ಮಹಿಳೆಯರಲ್ಲಿ ಬಂಜೆತನ ಇತ್ಯಾದಿಯಾಗಿ ಬಾಧಿಸುತ್ತಿದ್ದು ಕೊಕ್ಕಡ, ಪಟ್ರಮೆ, ಬೆಳಾಲು, ತೆಕ್ಕಾರು, ಬಾರ್ಯ, ನಿಡ್ಲೆ, ಕಣಿಯೂರು, ಮುಂಡಾಜೆ ಮೊದಲಾದ ಪ್ರದೇಶಗಳ ಬಾಧಿತ ಜನತೆ ನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಾ ಜೀವನ ಸಾಗಿಸುತ್ತಿರುವುದು ನಗ್ನಸತ್ಯ.
ಸಂತ್ರಸ್ತರು ನಡೆಸಿದ ಅನೇಕ ಹೋರಾಟಗಳ ಪರಿಣಾಮವಾಗಿ ಕಣ್ತೆರೆದುಕೊಂಡಿರುವ ಸರಕಾರ ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಮೂಲಕ ಸಂತ್ರಸ್ತರಿಗೆ ಮಾಶಾಸನ ಒದಗಿಸಿಕೊಡುತ್ತಿದೆ. ಜೊತೆಗೆ ಸ್ಮಾರ್ಟ್ ಕಾರ್ಡ್ ಒದಗಿಸುವ ಮೂಲಕ ಖಾಸಗಿ ಆಸ್ಪತ್ರೆಗಳಲ್ಲೂ ಅಗತ್ಯ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಿದೆ. ಫಿಸಿಯೋಥೆರಪಿ ಸಹಿತ ಇನ್ನೂ ಅನೇಕ ಸೌಲಭ್ಯಗಳನ್ನು ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆ ರೂಪಿಸಿದೆ.
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರದಲ್ಲಿ ಅಧಿಕಾರದಲ್ಲಿದ್ದಾಗ ಸಂತ್ರಸ್ತರಿಗೆ ಕೇರಳ ಮಾದರಿಯಲ್ಲಿ ಪರಿಹಾರ ಒದಗಿಸಿಕೊಡಬೇಕು ಎಂಬ ಬೇಡಿಕೆಯೆಡೆಗೆ ಕೊಂಚ ಗಮನಹರಿಸಿದ್ದ ಸರಕಾರ ಕೆಲವೊಂದು ಅನುಕೂಲತೆಗಳನ್ನು ನೀಡಿತ್ತು. ಅದರ ಒಂದು ಭಾಗವಾಗಿ ಕೊಕ್ಕಡ ಮತ್ತು ಪುತ್ತೂರಿನ ಆಲಂಗಾರಿನಲ್ಲಿ ಎಂಡೋ ಪೀಡಿತರಿಗಾಗಿ ಡೇಕೇರ್ ಸೆಂಟರ್ ಪ್ರಾರಂಭಿಸಿತ್ತು. ಸದ್ರಿ ಕೇಂದ್ರ ಇತರೆಡೆಗಳಲ್ಲೂ ಪ್ರಾರಂಭಿಸಬೇಕು ಎಂಬ ಒತ್ತಾಯದ ಮೇರೆಗೆ ಆ ಬಳಿಕದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಆಗಿನ ಆರೋಗ್ಯ ಸಚಿವರು ಉಜಿರೆಗೆ ಭೇಟಿ ನೀಡಿ ಈ ಬಗ್ಗೆ ಭರವಸೆ ನೀಡಿದ್ದರು.
ಉಜಿರೆ ಮಂಗನಕಾಯಿಲೆ ಸಂದರ್ಭ ಕಟ್ಟಿಸಿದ್ದ ಕೆಎಫ್‌ಡಿ ಕಟ್ಟಡ ಈಗ ಪುನರ್ಬಳಕೆ :
ಸುಮಾರು 30 ವರ್ಷಗಳಷ್ಟು ಹಿಂದೆ ತಾಲೂಕಿಗೆ ವಕ್ಕರಿಸಿದ್ದ ಮಾರಕವಾಗಿದ್ದ ಮಂಗನ ಕಾಯಿಲೆ ರೋಗ ನಿಯಂತ್ರಣಕ್ಕೆ ಮತ್ತು ತಪಾಸಣೆಗಾಗಿ ಉಜಿರೆ ರಥಬೀದಿ ಬಳಿ ನಿರ್ಮಿಸಿದ್ದ ಚಿಕಿತ್ಸಾ ಸೌಲಭ್ಯ ಕಟ್ಟಡ ಕೆ.ಎಫ್.ಡಿ. ಸೆಂಟರ್‌ನ ಕಟ್ಟಡವನ್ನು ಇದೀಗ ಎಂಡೋ ಸಲ್ಫಾನ್ ಡೇ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ.
ಇದಕ್ಕಾಗಿ ರಾಜ್ಯ ಸರಕಾರ ಆರೋಗ್ಯ ಇಲಾಖೆ ಮೂಲಕ (ಕೆ.ಎಚ್. ಎಸ್.ಡಿ.ಪಿ) ರೂ. 50 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಸದ್ರಿ ಅನುದಾನದಲ್ಲಿ ಕೆ.ಎಫ್.ಡಿ. ಸೆಂಟರ್ ಕಟ್ಟಡವನ್ನು ಸಂಪೂರ್ಣ ನವೀಕರಣಗೊಳಿಸಲಾಗಿದ್ದು, ನೆಲಕ್ಕೆ ವಿಟ್ರಿಫೈಡ್, ದಾರಂದ-ಕಿಟಕಿ ಮತ್ತು ಬಾಗಿಲುಗಳನ್ನು ನವೀಕರಿಸಲಾಗಿದೆ. ಸುಣ್ಣ- ಬಣ್ಣ, ಪ್ಯಾಸೇಜ್ ಮತ್ತು ಅಂಗಳಕ್ಕೆ ಇಂಟರ್‌ಲಾಕ್ ಅಳವಡಿಕೆ, ಡೈನಿಂಗ್ ಹಾಲ್, ಫಿಸಿಯೋಥೆರಫಿ ಮತ್ತು ಸ್ಪೀಚ್ ಥೆರಫಿ ಹಾಲ್, ರಿಕ್ವಿಝೇಶನ್ ಕ್ಲಬ್, ಅಗರಬತ್ತಿ, ಕ್ಯಾಂಡಲ್ ತಯಾರಿಕೆ ಸೇರಿದಂತೆ ಕೌಶಾಲ್ಯಾಭಿವೃದ್ಧಿ ತರಭೇತಿ ನೀಡಲು ಕೊಠಡಿಗಳು, ಅಡುಗೆ ಮನೆ, ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಕಂಪ್ಯೂಟರ್ ಡಾಟಾ ಎಂಟ್ರಿ ರೂಮ್, ಆಡಳಿತ ಕಚೇರಿ, ಇತ್ಯಾದಿ ಎಲ್ಲಾ ವ್ಯವಸ್ಥೆಗಳನ್ನೂ ರೂಪಿಸಲಾಗಿದೆ.

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top