Mon 18 Dec 2017, 1:17PM

ಹೆಚ್ಚಿನ ಸುದ್ದಿಗಳು

ಸರಕಾರಿ ಶಾಲೆಗಳಲ್ಲಿ ಶೌಚಾಲಯ, ಆವರಣ ಗೋಡೆದ್ದೇ ಸಮಸ್ಯೆ ಮಕ್ಕಳ ಸಂಸತ್ತಿನಲ್ಲಿ ಶಾಸಕರ ಮತ್ತು ಅಧಿಕಾರಿಗಳ ಮುಂದೆ ಮಕ್ಕಳ ಬೇಡಿಕೆ

Thursday, December 7th, 2017 | Suddi Belthangady | no responses

Makkala samsattuಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಇನ್ನೂ ಸಮರ್ಪಕ ಶೌಚಾಲಯಗಳಿಲ್ಲ ಮತ್ತು ಆವರಣ ಗೋಡೆ ಸಮಸ್ಯೆ ಇದೆ ಎಂಬ ಅಂಶ ಮತ್ತೊಮ್ಮೆ ಸಾಬೀತಾಗಿದೆ. ಎಲ್ಲ ಮನೆಗಳಲ್ಲಿ ಶೌಚಾಲಯ ಕಡ್ಡಾಯ ಎಂಬ ನಿಯಮವಿದ್ದರೂ, ಇತ್ತೀಚೆಗೆ ವಿಶೇಷ ತನಿಖಾ ದಳದಿಂದ ಶೌಚಾಲಯದ ಸಮೀಕ್ಷೆ ನಡೆದಿದ್ದರೂ ಇನ್ನೂ ಕೂಡ ತಾಲೂಕಿನ ಸರಕಾರಿ ಶಾಲೆಗಳು, ಸಂಸ್ಥೆಗಳು ಸಮಸ್ಯೆಯಿಂದ ಮುಕ್ತಿ ಕಂಡಿಲ್ಲ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಯಿತು.
ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಮಕ್ಕಳ ಹಕ್ಕುಗಳ ಮಾಸೋತ್ಸವ ಸಂಚಲನಾ ಸಮಿತಿ
ಬೆಳ್ತಂಗಡಿ ಇವರ ವತಿಯಿಂದ ವಿಮುಕ್ತಿ ಸಂಸ್ಥೆ ಮತ್ತು ಪಡಿ ಮಂಗಳೂರು ಇವರ ಸಹಕಾರದೊಂದಿಗೆ ಬೆಳ್ತಂಗಡಿ ಆಶಾ ಸಾಲಿಯಾನ ಸಭಾಂಗಣದಲ್ಲಿ ಡಿ.5 ರಂದು ನಡೆದ ಮಕ್ಕಳ ಸಂಸತ್ತು- 2017 ಅಧಿವೇಶನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ ಸಮರ್ಪಕ ಶೌಚಾಲಯದ ವ್ಯವಸ್ಥೆ ಇಲ್ಲ ಎಂದು ವಿದ್ಯಾರ್ಥಿ ಅಭಿಜಿತ್ ಮಕ್ಕಳ ಸಂಸತ್ತು ಸಭಾಪತಿಯಾಗಿದ್ದ ಶಾಸಕರ ಗಮನಕ್ಕೆ ತಂದರೆ, ಸಾವ್ಯ ಶಾಲೆಯಲ್ಲಿ ಶೌಚಾಲಯವಿಲ್ಲ ಎಂದು ವಿದ್ಯಾರ್ಥಿನಿ ವರ್ಷಾ ತಿಳಿಸಿದರು. ಕಕ್ಕಿಂಜೆ ಶಾಲೆಯಲ್ಲಿ 259 ಮಕ್ಕಳಿದ್ದರೂ, ಅದರಲ್ಲಿ 150 ರಷ್ಟು ಹೆಣ್ಣು ಮಕ್ಕಳೇ ಇದ್ದರೂ ತೃಪ್ತಿದಾಯ ಶೌಚಾಲಯ ವ್ಯವಸ್ಥೆ ಇಲ್ಲ ಎಂದು ತನ್ಸೀರ್ ಅವರು ದೂರಿಕೊಂಡರು. ಅಂತೆಯೇ ಪಡ್ಡಂದಡ್ಕ ಶಾಲೆಯಲ್ಲಿ ಶೌಚಾಲಯದ ಕೊರತೆ ಇದೆ ಎಂದು ಮುಹಮ್ಮದ್ ಎಂಬ ವಿದ್ಯಾರ್ಥಿ ಸಭೆಯಲ್ಲಿ ಪ್ರಸ್ತಾಪಿಸಿದರು.
ಇದಕ್ಕೆ ಉತ್ತರಿಸಿದ ಶಾಸಕರು ಇಲಾಖಾ ಅಧಿಕಾರಿಗಳನ್ನು ಮತ್ತು ಶಾಲಾ ಶಿಕ್ಷಕರನ್ನು ಎಬ್ಬಿಸಿ ನಿಲ್ಲಿಸಿ, ಈ ಬಗ್ಗೆ ಇಲಾಖೆ ಗಮನಕ್ಕೆ ಯಾಕೆ ತಂದಿಲ್ಲ, ತನಗೆ ಯಾಕೆ ಅರ್ಜಿ ನೀಡಿಲ್ಲ ಎಂದು ಪ್ರಶ್ನಿಸಿದರು. ಶೀಘ್ರದಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಕಕ್ಕಿಂಜೆ ಶಾಲೆಗೆ 2.50 ಲಕ್ಷ ರೂ ಅನುದಾನ ಮಂಜೂರಾಗಿದ್ದು ಅದರಲ್ಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಗಂಡು ಮಕ್ಕಳಿಗೆ 4 ಮೂತ್ರಾಲಯ, 2 ಶೌಚಾಲಯ, ಹೆಣ್ಣು ಮಕ್ಕಳಿಗಾಗಿ 2 ಮೂತ್ರಾಲಯ ಮತ್ತು 2 ಶೌಚಾಲಯಗಳನ್ನು ಹೆಚ್ಚುವರಿಯಾಗಿ ನಿರ್ಮಿಸುವಂತೆ ಹೇಳಿದರು.
ಪಡ್ಡಂದಡ್ಕದಲ್ಲಿ ಬ್ಲಾಕ್ ಆಗಿರುವ ಶೌಚಾಲಯವನ್ನು ದುರಸ್ಥಿಗೊಳಿಸಿ 2 ಶೌಚಾಲಯ, ನಿರ್ಮಿಸಿಕೊಳ್ಳುವಂತೆ ತಿಳಿಸಿದರು.
ಆವರಣ ಗೋಡೆಗಳಿಲ್ಲದೆ ಸಮಸ್ಯೆ:
ನಮ್ಮ ಶಾಲೆಗೆ ಆವರಣ ಗೋಡೆಗಳಿಲ್ಲದೆ ನಾವು ನೆಟ್ಟು ಬೆಳೆಸಿದ ಹೂಗಿಡಗಳು, ತರಕಾರಿ ಇವೆಲ್ಲವುಗಳು ದನಕರುಗಳ ಪಾಲಾಗುತ್ತಿವೆ ಎಂದು ಬಂಗಾಡಿ ಸರಕಾರಿ ಶಾಲಾ ವಿದ್ಯಾರ್ಥಿನಿ ಪ್ರತೀಕ್ಷಾ, ಕಳೆಂಜ ಶಾಲಾ ಸುವೈತಾ ಅನ್ಸಾದ್, ಪಡಂಗಡಿ ಶಾಲಾ ಭರತ್ ಕುಮಾರ್, ಹಳೆಪೇಟೆ ಶಾಲೆಯ ಕಾವ್ಯಾ, ಪೆರಿಯಡ್ಕ ಶಾಲೆಯ ಇಂಚರಾ, ಇವರೆಲ್ಲಾ ಶಾಸಕರ ಬಳಿ ಪ್ರಶ್ನೆ ಕೇಳಿದರು.
ಯಾವ್ಯಾವ ಶಾಲೆಗೆ ಆವರಣ ಗೋಡೆಯ ಅವಶ್ಯಕತೆ ಇದೆಯೋ ಅಲ್ಲಿಗೆ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಎಂ.ಜಿ.ಎನ್. ಆರ್.ಇ.ಜಿ) (ನರೇಗಾ)ದಡಿ ಕಾಮಗಾರಿ ಮಾಡಿಸಿಕೊಳ್ಳುವ ಅವಕಾಶ ಇದೆ. ನೀವೇ ನಿಮ್ಮ ವ್ಯಾಪ್ತಿಯ ಪಂಚಾಯತ್‌ಗಳಿಗೆ ಹೋಗಿ ಅಧ್ಯಕ್ಷರ ಬಳಿ ನಿವೇದಿಸಿಕೊಂಡು ಆ ಶಾಲೆಯ ಕಾಮಗಾರಿಯನ್ನು ಪಂಚಾಯತ್ ಕ್ರಿಯಾಯೋಜನೆಯಲ್ಲಿ ಸೇರಿಸಿಕೊಳ್ಳುವಂತೆ ಕೇಳಿಕೊಳ್ಳಿ. ಅವರು ಒಂದು ವೇಳೆ ಒಪ್ಪಿಕೊಳ್ಳದಿದ್ದರೆ ನನ್ನ ನಂಬರ್‌ಗೆ ನೇರ ಕರೆಮಾಡಿ ತಿಳಿಸಿ ಎಂದು ಶಾಸಕರು ಎಲ್ಲ ವಿದ್ಯಾರ್ಥಿಗಳಿಗೂ ಫೋನ್ ನಂಬರ್ ಕೊಟ್ಟರು.
ನಂತರ ಮಾಹಿತಿ ವೇಳೆ ಮಾತನಾಡಿದ ಇ.ಒ. ಬಸವರಾಜ್ ಅಯ್ಯಣ್ಣನವರ್ ಅವರು, ಎನ್. ಆರ್.ಇ.ಜಿ. ಯೋಜನೆಯಡಿ 50 ಸಾವಿರದಿಂದ 5 ಲಕ್ಷ ರೂ. ವರೆಗೂ ಆವರಣ ಗೋಡೆ ಇತ್ಯಾದಿ ಅನುದಾನ ಪಡೆದುಕೊಳ್ಳಲು ಅವಕಾಶ ಇದೆ ಎಂದರು. ಈ ವೇಳೆ ಮಾತನಾಡಿದ ಎಇಇ ಸಿ. ಆರ್ ನರೇಂದ್ರ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ಆವರಣ ಗೋಡೆ ಪ್ರಶ್ನೆ ಕೇಳುವ ಬದಲು ಎಲ್ಲೆಲ್ಲಾ ಆವರಣ ಗೋಡೆ ಇಲ್ಲ ಎಂಬುದನ್ನು ಶಿಕ್ಷಣ ಇಲಾಖೆಯಿಂದಲೇ ಪಟ್ಟಿಮಾಡಿ ಇಒ ಅವರ ಮುಖಾಂತರ ಅಥವಾ ಪಂಚಾಯತ್ ಮುಖಾಂತರ ಪತ್ರ ಬರೆದು ಮಾಡಿಸಿಕೊಳ್ಳುವುದು ಉತ್ತಮ ಎಂದರು.
ಬೆಳಾಲು ರಸ್ತೆ ದುರಸ್ಥಿಗೆ 18 ಕೋಟಿ ರೂ. ಮಂಜೂರು :
ಕೊಯ್ಯೂರು ಕಸಬಾ ಮಲೆಬೆಟ್ಟು ಶಾಲಾ ವಿದ್ಯಾರ್ಥಿ ಸುಷ್ಮಾ ಅವರು ತಮ್ಮ ಶಾಲೆಯ ರಸ್ತೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾಸಕ ವಸಂತ ಬಂಗೇರ ಅವರು ಈಗಾಗಲೇ ಕೊಯ್ಯೂರು ರಸ್ತೆಗೆ 18 ಕೋಟಿ ರೂ. ಮಂಜೂರಾತಿ ಆಗಿದೆ. ಬೆಳ್ತಂಗಡಿ- ಕೊಯ್ಯೂರು – ಉಜಿರೆ ರಸ್ತೆಗಳನ್ನು ಮತ್ತು ತಾಲೂಕಿನ ಇತರ ಕೆಲವು ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಈಗಾಗಲೇ ಪತ್ರ ಬರೆಯಲಾಗಿದೆ. ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಾರೆಂಕಿಯಿಂದ ಪುಂಜಾಲಕಟ್ಟೆ ರಸ್ತೆ ಕೂಡ ಹಾಳಾಗಿದ್ದು ಹಾಸ್ಟೆಲ್‌ನಿಂದ ಶಾಲೆಗೆ 3 ಕಿ.ಮೀ ನಡೆದುಕೊಂಡೇ ಹೋಗಬೇಕಾಗಿದೆ ಎಂದು ದೀಕ್ಷಿತಾ ಎಂಬ ವಿದ್ಯಾರ್ಥಿನಿ ದೂರಿಕೊಂಡರು.
ನೆಕ್ಕಿಲು- ಕುಪ್ಪೆಟ್ಟಿ ರಸ್ತೆ ಅರ್ಧ ಆಗಿದ್ದು ಉಳಿಕೆ ರಸ್ತೆ ಸರಿಪಡಿಸಿಕೊಡುವಂತೆ ಅನಿಸಾ ಎಂಬ ವಿದ್ಯಾರ್ಥಿನಿ ಶಾಸಕರಲ್ಲಿ ಭಿನ್ನವಿಸಿಕೊಂಡರು.
ಬೆಲಾಲು ರಸ್ತೆಯಲ್ಲಿರುವ 2 ಬಾರ್‌ಗಳ ಬಳಿ ರಸ್ತೆಯಲ್ಲೇ ವಾಹನ ನಿಲುಗಡೆ:
ಬೆಳಾಲು ರಸ್ತೆಯಲ್ಲಿ ಇದೀಗ 2 ಬಾರ್‌ಗಳ ಆಗಿದ್ದು ಇಲ್ಲಿ ರಸ್ತೆಯಲ್ಲೇ ವಾಹನಗಳ ನಿಲುಗಡೆಯಾಗಿರುವುದರಿಂದ ದಾರಿಹೋಕರಿಗೆ ಸಮಸ್ಯೆಯಾಗುತ್ತಿದೆ ಎಂದು ಬದನಾಜೆ ಶಾಲೆಯ ಪ್ರಜ್ವಲ್ ದೂರಿಕೊಂಡರು. ಈ ಬಗ್ಗೆ ಬಾರ್ ಮಾಲಿಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಅಬಕಾರಿ ಇನ್ಸ್‌ಪೆಕ್ಟರ್ ಸೌಮ್ಯಲತಾ ಅವರಿಗೆ ಶಾಸಕರು ಸೂಚನೆ ನೀಡಿದರು. ಅಗತ್ಯ ಬಿದ್ದಲ್ಲಿ ಪೊಲೀಸ್ ಇಲಾಖೆ ಸಹಾಯ ಪಡೆದುಕೊಂಡು ಕಾನೂನು ಕ್ರಮ ಜರುಗಿಸುವಂತೆಯೂ ತಿಳಿಸಿದರು.
ಬದನಾಜೆ ಶಾಲಾ ವಿದ್ಯಾರ್ಥಿನಿ ಕಮರುನ್ನಿಸಾ ಪ್ರಶ್ನೆ ಕೇಳಿ, ಶಾಲಾ ಪರೀಕ್ಷೆ ಸಮಯದಲ್ಲಿ ಶಿಕ್ಷಕರಿಗೆ ಟ್ರೈನಿಂಗ್‌ಗೆ ಕಳಿಸ್ತಾರೆ, ವೇಗಧೂತ ಬಸ್ಸುಗಳು ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತಿಲ್ಲ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಶಾಸಕರು, ಪರೀಕ್ಷೆ ಹತ್ತಿರ ಬರುವ ವೇಳೆ ಟ್ರೈನಿಂಗ್ ಬೇಡ ಎಂದರು. ಸರಕಾರಿ ಬಸ್ಸು ಬಗ್ಗೆ ಸ್ವಲ್ಪ ಘರಂ ಆದ ಶಾಸಕರು ಕೆಎಸ್‌ಆರ್‌ಟಿಸಿ ಇಲಾಖಾ ಅಧಿಕಾರಿಗಳನ್ನುದ್ದೇಶಿಸಿ, ಶಾಲಾ ಮಕ್ಕಳನ್ನು ಕಾಣುವಾಗ ನಿಮ್ಮ ಚಾಲಕರುಗಳು ಸ್ಪೀಡ್ ಜಾಸ್ತಿ ಮಾಡ್ತಾರೆ, ಇಳಿಸುವ ಜಾಗ ಬಂದಾಗಲೂ ಒಂದೆರಡು ಪರ್ಲಾಂಗ್ ಮುಂದೆ ಕೊಂಡೋಗಿ ನಿಲ್ಲಿಸ್ತಾರೆ. ಮುಂದಕ್ಕೆ ಈ ರೀತಿ ದೂರು ಬಂದರೆ ಅಂತಹ ಚಾಲಕ ನಿರ್ವಾಹಕರನ್ನು ಸಸ್ಪೆಂಡ್ ಮಾಡಿ, ಹೆಣ್ಣು ಮಕ್ಕಳ ಜೊತೆ ಅಸಹ್ಯವಾಗಿ ವರ್ತಿಸುವುದು, ಚೆಲ್ಲಾಟ ಆಡುವ ಸಿಬ್ಬಂದಿಗಳೂ ಇದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು. ಕನ್ಯಾಡಿ ಉಪಕೇಂದ್ರಕ್ಕೆ ವೈದ್ಯರು ಬೇಕು ನಡ ಶಾಲೆಯ ಸೋನಾಕ್ಷಿ, ಹಿಂದಿ ಶಿಕ್ಷಕರಿಲ್ಲ ಎಂದು ಪಡಂಗಡಿ ಶಾಲಾ ಭರತ್ ಕುಮಾರ್, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ಕಾಯರ್ತಡ್ಕ ಶಾಲಾ ಕವಿತಾ, ಹಳೆಪೇಟೆ ಶಾಲಾ ಆವರಣದೊಳಗೆ ಮೇಯಲು ಮೇಕೆ ಬಿಡಲಾಗುತ್ತಿದೆ ಎಂದು ಕಾವ್ಯಾ, ಎಂಡೋ ಪೀಡಿತ ಮಕ್ಕಳಿಗೆ ಪುನರ್ವಸತಿ ಮಾಡಿಕೊಡಬೇಕೆಂದು ಬೆಳ್ತಂಗಡಿ ಮಾದರಿ ಶಾಲೆಯ ಆಕಾಶ್, ಕಂಪ್ಯೂಟರ್ ಇಲ್ಲ ಎಂದು ಗುರಿಪಳ್ಳ ಶಾಲಾ ಚಿತ್ರಾಕ್ಷಿ, ಉಜಿರೆ ಗುರಿಪಳ್ಳ ರಸ್ತೆಯ ಪ್ರಾರಂಭಿಕ ಜಾಗದಲ್ಲಿ ರಸ್ತೆ ಸರಿಯಿಲ್ಲ ಎಂದು ಆಕಾಶ್, ಮೇಲ್ಛಾವಣಿ ಸರಿಯಿಲ್ಲ, ಗೋಡೆ ಬಿರುಕು ಬಿಟ್ಟಿವೆ ಎಂದು ನಡ ಶಾಲಾ ಅಖಿಲಾ, ಪಾರೆಂಕಿ ವಸತಿ ಶಾಲೆಯಲ್ಲಿ ಬಟ್ಟೆ ಒಗೆಯುವ ವ್ಯವಸ್ಥೆ ಒಳಗಡೆಯೇ ಮಾಡಿಕೊಡಬೇಕು ಎಂದು ಪ್ರತೀಕ್ಷಾ, ಮಕ್ಕಳ ಹಕ್ಕುಗಳ ಸಮಿತಿ ಶಾಲೆಗಳಲ್ಲಿ ಮಾತ್ರವಲ್ಲ ಮದರಸ ಮತ್ತು ಚರ್ಚ್‌ನಲ್ಲಿ ಕಲಿಯುತ್ತಿರುವ ಶಾಲೆಗಳಿಗೂ ಅನ್ವಯವಾಗಬೇಕು ಎಂದು ಶ್ರೇಯಾ, ಪುಸ್ತಕಗಳೇ ನಮಗೆ ಹೊರೆಯಾಗುತ್ತಿದೆ, ನಮ್ಮ ಶಾಲೆಯ ಬಳಿ ತಂಗುದಾಣ ಬೇಕು ಮತ್ತು ನಮ್ಮ ಶಾಲೆಯ ರಸ್ತೆ ದುರಸ್ಥಿಯಾಗಬೇಕು ಎಂದು ಸೈಂಟ್‌ಮೇರಿ ಶಾಲೆಯ ಯಶಸ್ ಶೆಟ್ಟಿ ಇವರೆಲ್ಲಾ ಶಿಸ್ತು ಬದ್ಧವಾಗಿ ತಮ್ಮ ಬೇಡಿಕೆಗಳನ್ನು ಸದನದ ಮುಂದಿಟ್ಟುಕೊಂಡು ಉತ್ತರ, ಪರಿಹಾರಗಳನ್ನು ಪಡೆದುಕೊಳ್ಳಲು ಪ್ರಯತ್ನಪಟ್ಟರು.
ಆದೂರ್ ಪೆರಾಲ್ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಬೇಕು ಎಂದು ವಿದ್ಯಾರ್ಥಿನಿ ಜಾಹ್ನವಿ ಬೇಡಿಕೆ ಇಟ್ಟರು. 200 ವಿದ್ಯಾರ್ಥಿಗಳ ಸಂಖ್ಯಾ ಬಲ ಇದ್ದರೆ ಮಾತ್ರ ಈ ಹುದ್ದೆ ಲಭಿಸಲು ಸಾಧ್ಯ ಎಂದು ಶಾಸಕರು ಮನವರಿಕೆ ಮಾಡಿಕೊಟ್ಟರು.
ಮಕ್ಕಳ ರಕ್ಷಣಾಧಿಕಾರಿಗೆ ಶಾಸಕರಿಂದ ತರಾಟೆ:
ತಾಲೂಕಿನ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳು ಹಕ್ಕುಗಳ ಬಗ್ಗೆ ಜಾಗೃತಿ ಮತ್ತು ಮಾಹಿತಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಡೆಸಿಲ್ಲ ಎಂದು ಶಾಸಕರು ಅದರ ಜಿಲ್ಲಾ ಮಟ್ಟದ ಅಧಿಕಾರಿ ಶಿವಾನಂದ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಮಾತನಾಡಿದ ಶಿವಾನಂದ ಅವರು ನಾವು ಈಗಾಗಲೇ ಕಡಿರುದ್ಯಾವರ, ಮಿತ್ತಬಾಗಿಲು ಮೊದಲಾದೆಡೆ ಮಾಹಿತಿ ನೀಡಿರುವುದಾಗಿ ತಿಳಿಸಿದರು. ಈ ವೇಳೆ ಮಾತನಾಡಿದ ಶಾಸಕರು, ಮುಂದಿನ 20 ದಿನಗಳ ಒಳಗಾಗಿ ಎಲ್ಲ ಶಾಲೆಗಳನ್ನು ಸಂದರ್ಶಿಸುವಂತೆ ಸೂಚಿಸಿದರು.
ಶ್ರೀಧರ ಕಳೆಂಜ, ರಾಜರಾಮ ಟಿ, ಗೋಪಾಲಕೃಷ್ಣ ಗುರುವಾಯನಕೆರೆ, ಝಾಕಿರ್ ಹುಸೈನ್, ಸುಧಾಮಣಿ ರಮಾನಂದ್, ಸಿ.ಕೆ. ಚಂದ್ರಕಲಾ ಮೊದಲಾದವರು ಸಹಕಾರ ನೀಡಿದರು.

Leave a Reply


ಇಂದಿನ ಕಾರ್ಯಕ್ರಮ

ಶಿಕ್ಷಣ ಮಾರ್ಗದರ್ಶಿ

ಹಿಂದಿನ ಸುದ್ದಿಗಳು

December 2017
M T W T F S S
« Nov    
 123
45678910
11121314151617
18192021222324
25262728293031

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಬೆಳ್ತಂಗಡಿ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  22
.. ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2017 Suddinews.com . All Rights Reserved.
^ Back to Top