Wed 17 Jan 2018, 4:35AM

468X60

‘ಸುದ್ದಿ ಸಂಪದ’ ಲೋಕಾರ್ಪಣೆ

Tuesday, August 26th, 2014 | suddiputtur | no responses

ಪುತ್ತೂರು: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದೊಂದಿಗೆ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಸಮೂಹ ಸಂಸ್ಥೆಗಳು ಪ್ರಸ್ತುತಪಡಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶ ಮತ್ತು ಪುತ್ತೂರು ತಾಲೂಕು ಧಾರ್ಮಿಕ ಕ್ಷೇತ್ರಗಳ ಸಮಗ್ರ ಮಾಹಿತಿಯನ್ನೊಳಗೊಂಡ ಕೃತಿ “ಸುದ್ದಿ ಸಂಪದ” ಇದರ ಲೋಕಾರ್ಪಣಾ ಸಮಾರಂಭ ಆ.26ರಂದು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.

ಕೃತಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯಲಿ: ರಾಮ್ ಭಟ್

ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕರೂ ಆದ ಕೆ.ರಾಮ್ ಭಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಇತಿಹಾಸ ಹಾಗೂ ಬ್ರಹ್ಮಕಲಶೋತ್ಸವದ ಮಾಹಿತಿಯೊಂದಿಗೆ ತಾಲೂಕಿನ ಇತರೇ ದೇವಸ್ಥಾನಗಳ ವಿವರಗಳುಳ್ಳ ಈ ಕೃತಿ ಶಾಶ್ವತವಾಗಿ ನೆನಪಿನಲ್ಲಿಡುವಂತದ್ದಾಗಿದೆ ಎಂದರು. ಅನೇಕ ಪತ್ರಿಕೆಗಳ ನಡುವೆ ಹುಟ್ಟಿಕೊಂಡಿರುವ ‘ಸುದ್ದಿಪತ್ರಿಕೆ’ ೨೬ ವರ್ಷಗಳಿಂದ ಬೆಳೆದುಕೊಂಡು ಬಂದಿದ್ದು ಇಂದು ತಾಲೂಕಿನ ಮೂಲೆ ಮೂಲೆಗಳಿಗೆ ‘ಸುದ್ದಿ’ ತಲುಪುತ್ತಿದೆ ಎಂದರು.

ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿ: ಸಂಕಪ್ಪ ರೈ

ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಜೀರ್ಣೋದ್ಧಾರ ಸಮಿತಿಯ ಇನ್ನೋರ್ವ ಗೌರವಾಧ್ಯಕ್ಷ, ದ.ಕ.ಜಿ.ಪಂ. ಮಾಜಿ ಅಧ್ಯಕ್ಷರೂ ಆದ ಬೆಳ್ಳಿಪ್ಪಾಡಿ ಸಂಕಪ್ಪ ರೈ, ದೇವಾಲಯ ನಿರ್ಮಾಣ ಕಾರ‍್ಯಕ್ರಮದಲ್ಲಿ ಪ್ರತಿಯೊಬ್ಬ ಭಕ್ತರೂ ಕೈಜೋಡಿಸಿದ್ದಾರೆ. ಇದೊಂದು ನಾವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಕಾರ‍್ಯವಾಗಿದೆ. ಇಲ್ಲಿನ ಮಾಹಿತಿ, ವಿಚಾರಗಳನ್ನೊಳಗೊಂಡ ಕೃತಿ ಪ್ರಕಟಗೊಳಿಸಿರುವುದು ಸಂತಸ ತಂದಿದೆ. ಈ ಕೃತಿ ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಗಲಿ ಎಂದರು.

ಪ್ರತಿ ಮನೆಗಳಿಗೂ ಕೃತಿ ಮುಟ್ಟಲಿ: ಶಕುಂತಳಾ ಶೆಟ್ಟಿ ಸುದ್ದಿ ಸಂಪದ ಬಳಗಕ್ಕೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಶಾಸಕಿ ಶಕುಂತಳಾ ಶೆಟ್ಟಿ, ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶದ ಮಾಹಿತಿಯೊಂದಿಗೆ ತಾಲೂಕಿನ ಹಳ್ಳಿಯ ಮೂಲೆ, ಮೂಲೆಗಳ ದೇವಸ್ಥಾನಗಳ ಮಾಹಿತಿ ಸಂಗ್ರಹಿಸಿ ಅಲ್ಲಿನ ಪ್ರತೀತಿಗಳನ್ನು ಜನರ ಮನಸ್ಸಿಗೆ ಮುಟ್ಟಿಸುವ ಕೆಲಸ ಮಾಡುವ ಮೂಲಕ ಎಲ್ಲಾ ದೇವಸ್ಥಾನಗಳಿಗೂ ಸಣ್ಣ ಮಟ್ಟಿನ ಬಹ್ಮಕಲಶ ಮಾಡಿದಂತಾಗಿದೆ. ಹಿಂದೆ ಋಷಿಗಳು ಕೃತಿಗಳನ್ನು ಪೂಜಿಸುತ್ತಿದ್ದರು. ಎಲ್ಲಾ ದೇವಸ್ಥಾನಗಳ ಮಾಹಿತಿಯನ್ನೊಳಗೊಂಡ ಈ ಕೃತಿಯೂ ಪೂಜನೀಯ ವಸ್ತುವಾಗಿದೆ. ಎಲ್ಲರ ಮನೆಗಳಿಗೂ ಕೃತಿ ತಲುಪಲಿ ಎಂದರು. ಸುದ್ದಿ ಪತ್ರಿಕೆಯೊಂದಿಗೆ ಎಲ್ಲರಿಗೂ ಆತ್ಮೀಯತೆ ಬೆಳೆದುಕೊಂಡಿದೆ. ಬಜಾಜ್ ಕಂಪನಿಯಲ್ಲಿ ಹಿರಿಯ ಅಧಿಕಾರಿಯಾಗಿರುವ ನನ್ನ ಸಹೋದರನೂ ಇಂಟರ್‌ನೆಟ್ ಮೂಲಕ ಪತ್ರಿಕೆ ಓದುತ್ತಿದ್ದಾನೆ. ರಾಜಕೀಯ ಬಳಸದೆ, ರಾಜಕೀಯ ಪಕ್ಷಗಳ ಗುಲಾಮನಾಗದೇ ಯಾವುದೇ ಪೂರ್ವಾಗ್ರಹವಿಲ್ಲದೆ ನೇರವಾಗಿ ಬರೆಯುವ ಪತ್ರಿಕೆ ‘ಸುದ್ದಿ’ಎಂದು ಶಕುಂತಳಾ ಶೆಟ್ಟಿ ಬಣ್ಣಿಸಿದರು.

ಕ್ಷೇತ್ರ ಅಭಿವೃದ್ಧಿಗೆ ಸರಿಯಾದ ಮಾಹಿತಿ ಬೇಕು: ಡಾ.ಯು.ಪಿ.ಶಿವಾನಂದ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಮಾತನಾಡಿ, ಧಾರ್ಮಿಕ, ಶೈಕಣಿಕ ಸೇರಿದಂತೆ ಯಾವುದೇ ಕ್ಷೇತ್ರ ಅಭಿವೃದ್ಧಿಗೊಳ್ಳಬೇಕಾದಲ್ಲಿ ಸರಿಯಾದ ಮಾಹಿತಿ ಬೇಕು. ಸುದ್ದಿ ಸಂಪದದ ಮೂಲಕ ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಚರಿತ್ರೆಯನ್ನು ಗುರುತಿಸುವ ಕೆಲಸ ಆಗಿದೆ. ಜೊತೆಗೆ ತಾಲೂಕಿನ ಇತರೇ ದೇವಸ್ಥಾನಗಳ ಮಾಹಿತಿಯೂ ಇದ್ದು ಪ್ರವಾಸೋದ್ಯಮದ ದೃಷ್ಟಿಯಿಂದ ಇದು ಸಹಕಾರಿಯಾಗಲಿದೆ. ಇನ್ನು ಮುಂದೆ ತಾಲೂಕಿನೆಲ್ಲೆಡೆ ಇರುವ ಸುದ್ದಿ ಸೆಂಟರ್‌ಗಳ ಮೂಲಕವೂ ದೇವಾಲಯಗಳ ಬಗ್ಗೆ ಮಾಹಿತಿ ದೊರೆಯಲಿದೆ ಎಂದರು. ಪುಸ್ತಕದ ಯಶಸ್ವಿಗೆ ವ್ಯವಸ್ಥಾಪನಾ ಸಮಿತಿ, ಜೀರ್ಣೋದ್ಧಾರ ಸಮಿತಿ ಹಾಗೂ ಅಧಿಕಾರಿ ವರ್ಗದವರು ಸಹಕರಿಸಿದ್ದಾರೆ. ‘ಸುದ್ದಿ ಸಂಪದ’ದಲ್ಲಿನ ಸಂಪೂರ್ಣ ಮಾಹಿತಿ ಅಂತರ್ಜಾದಲ್ಲಿಯೂ ದೊರಕಲಿದೆ. ತಪ್ಪುಗಳಿದ್ದಲ್ಲಿ ಅಂತರ್ಜಾಲದಲ್ಲಿ ಹಾಗೂ ಮರು ಮದ್ರಣದ ವೇಳೆ ಸರಿಪಡಿಸಿಕೊಳ್ಳುತ್ತೇವೆ ಎಂದರು.

ಸ್ಮರಣ ಸಂಚಿಕೆ’ಸುದ್ದಿ ಬಳಗದಿಂದ ಸಾಕಾರಗೊಂಡಿದೆ: ನನ್ಯ

ಮುಖ್ಯ ಅತಿಥಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿರುವ ನನ್ಯ ಅಚ್ಚುತ ಮೂಡೆತ್ತಾಯರು ಮಾತನಾಡಿ, ೧೧ ತಿಂಗಳಲ್ಲಿ ದೇವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿದೆ. ಜೀರ್ಣೋದ್ಧಾರ ಕಾರ‍್ಯ ಹಾಗೂ ಬ್ರಹ್ಮಕಲಶೋತ್ಸವದ ದಾಖಲೆಗಳನ್ನೊಳಗೊಂಡ ‘ಸ್ಮರಣ ಸಂಚಿಕೆ’ ಹೊರತರಲು ಸಮಯದ ಕೊರತೆಯಿಂದ ಸಾಧ್ಯವಾಗಿಲ್ಲ. ಆದರೂ ಇಲ್ಲಿನ ಬ್ರಹ್ಮಕಲಶೋತ್ಸವದ ಕಾರ‍್ಯಕ್ರಮಗಳ ದಾಖಲೀಕರಣ ಮಾಡಬೇಕಾದ ಅವಶ್ಯಕತೆ ಇತ್ತು. ಇದೇ ವೇಳೆ ಸುದ್ದಿ ಮಾಹಿತಿ ಟ್ರಸ್ಟ್’ಸ್ಮರಣ ಸಂಚಿಕೆ’ ಹೊರತರಲು ಮುಂದಾಗಿದ್ದು ಇದಕ್ಕೆ ಸಹಕಾರ ನೀಡಿದ್ದೇವೆ ಎಂದರು. ೧೧ ವರ್ಷಗಳ ಹಿಂದೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಬ್ರಹ್ಮಕಲಶೋತ್ಸವ ಕುರಿತ ಮಾಹಿತಿಯನ್ನೊಳಗೊಂಡ ‘ಪಂಚಾಕ್ಷರಿ’ ಸ್ಮರಣ ಸಂಚಿಕೆಯನ್ನು ‘ಸುದ್ದಿ’ವತಿಯಿಂದ ಹೊರ ತಂದಿದ್ದು ಇದರಲ್ಲಿ ಕಾವು ಗ್ರಾಮದ ಸಮಗ್ರ ಚಿತ್ರಣವೂ ಒಳಗೊಂಡಿದೆ ಎಂದು ಅಚ್ಚುತ ಮೂಡೆತ್ತಾಯರು ನೆನಪಿಸಿಕೊಂಡರು. ಮುಂದಿನ ದಿನಗಳಲ್ಲಿ ಸುದ್ದಿ ಮಾಹಿತಿ ಟ್ರಸ್ಟ್‌ನಿಂದ ಇನ್ನಷ್ಟೂ ಕೊಡುಗೆಗಳು ಮೂಡಿಬರಲಿ ಎಂದು ಅವರು ಹಾರೈಸಿದರು.

ಕೃತಿ ಶಾಲೆ, ಗ್ರಂಥಾಲಯಗಳಲ್ಲೂ ಲಭಿಸಲಿ: ಚನಿಲ

ಇನ್ನೋರ್ವ ಅತಿಥಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಚನಿಲ ತಿಮ್ಮಪ್ಪ ಶೆಟ್ಟಿ ಮಾತನಾಡಿ, ದೇವಸ್ಥಾನದ ಬ್ರಹ್ಮಕಲಶೋತ್ಸವದ ಎಲ್ಲಾ ಕಾರ‍್ಯಗಳು ಪೂರ್ಣಗೊಂಡಿದ್ದರೂ ೧ ಲೋಪವಾಗಿತ್ತು. ಇದೀಗ ಸುದ್ದಿ ಬಳಗದಿಂದ ಅದು ಪ್ರಕಟಗೊಳ್ಳುವ ಮೂಲಕ ಪರಿಪೂರ್ಣಗೊಂಡಿದೆ. ‘ಸುದ್ದಿ ಸಂಪದ’ಕೃತಿ ಪ್ರತಿ ಮನೆಗಳಿಗೂ ಮುಟ್ಟಬೇಕು. ತಾಲೂಕಿನ ಎಲ್ಲಾ ದೇವಸ್ಥಾನಗಳಲ್ಲೂ ದೊರೆಯುವಂತಾಗಬೇಕು. ಅಲ್ಲದೇ ಶಾಲೆಗಳಲ್ಲಿ, ಗ್ರಂಥಾಲಯಗಳಲ್ಲಿ ದೊರೆಯುವಂತೆ ಮಾಡಲು ಸರಕಾರವನ್ನು ಕೇಳಿಕೊಳ್ಳಬೇಕೆಂದು ಹೇಳಿದರು. ಮತ್ತೋರ್ವ ಅತಿಥಿ, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್ ಮಾತನಾಡಿ, ಮುಂದಿನ ಜನಾಂಗಕ್ಕೆ, ಆಡಳಿತ ವರ್ಗಕ್ಕೆ ಅನುಕೂಲವಾಗುವಂತೆ ಇಲ್ಲಿನ ಕಾರ್ಯಕ್ರಮಗಳನ್ನು ದಾಖಲೆ ಮಾಡುವ ಕೆಲಸ ಸುದ್ದಿ ಬಳಗದಿಂದ ಆಗಿದೆ ಎಂದು ಮೆಚ್ಚುಗೆ ಸೂಚಿಸಿದರು. ಭಕ್ತರ ನಂಬಿಕೆ, ಪ್ರೀತಿ ಮೇಲೆ ದೇವಾಲಯ ಬೆಳೆಯುತ್ತದೆ. ಇಲ್ಲಿಗೆ ಬರುವ ಭಕ್ತಾದಿಗಳಿಗೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿಕೊಡಬೇಕಾಗಿದೆ. ಕಲ್ಯಾಣ ಮಂಟಪ ಅರ್ಧದಲ್ಲೇ ನಿಂತುಹೋಗಿದ್ದು ಇದನ್ನು ಪೂರ್ಣಗೊಳಿಸಬೇಕಾಗಿದೆ. ಕಲಾವಿದರಿಗೆ ಆಶ್ರಯ ನೀಡುವ ದೃಷ್ಟಿಯಿಂದ ಯಕ್ಷಗಾನ ಮೇಳ ಆರಂಭಿಸಬೇಕು. ಇದರಿಂದ ದೇವಸ್ಥಾನದ ಪ್ರಚಾರವೂ ಆಗಲಿದ್ದು ಭಕ್ತರ ಸಂಖ್ಯೆಯೂ ವೃದ್ಧಿಯಾಗಲಿದೆ. ಈ ನಿಟ್ಟಿನಲ್ಲಿ ವ್ಯವಸ್ಥಾಪನಾ ಸಮಿತಿ ಕಾರ‍್ಯೋನ್ಮುಖವಾಗಬೇಕೆಂದು ಎನ್.ಕೆ.ಜಗನ್ನಿವಾಸ ರಾವ್ ಹೇಳಿದರು.

೫೦೦ ವರ್ಷ ಕಳೆದರೂ ದಾಖಲೆಯಾಗಿ ಉಳಿಯಲೇಬೇಕಾದ ಕೃತಿಯಾಗಿ ಹೊರಹೊಮ್ಮಿದೆಪ್ರೊ. ಬಿ.ಜೆ. ಸುವರ್ಣ

‘ಸುದ್ದಿ ಸಂಪದ’-ನಲ್ನುಡಿ ಆಡಿದ ನಿವೃತ್ತ ಉಪನ್ಯಾಸಕ ಪ್ರೊ. ಬಿ.ಜೆ.ಸುವರ್ಣರವರು, ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇಳೆ ಆಗಿರುವ ಎಲ್ಲಾ ಪ್ರಕ್ರಿಯೆಗಳನ್ನು ದಾಖಲಿಸುವ ಮೂಲಕ ಪರಿಪೂರ್ಣಗೊಳಿಸಬೇಕೆಂಬ ವ್ಯವಸ್ಥೆಗೆ ಸುದ್ದಿ ಬಳಗ ಪೂರಕವಾಗಿ ಸ್ಪಂದಿಸಿ ಸಾಕಾರಗೊಳಿಸಿದೆ. ಸ್ವಚ್ಛ ನಿರೂಪಣೆಯೊಂದಿಗೆ ಅದ್ಭುತ ಕೃತಿಯಾಗಿ ಇದು ರಚನೆಗೊಂಡಿದೆ. ದೇವಸ್ಥಾನ, ಕಾರ‍್ಯಕ್ರಮದ ವಿವಿಧ ಫೋಟೋಗಳು, ದಾನಿಗಳ ವಿವರ, ಧರ್ಮಸೇನಾನಿಗಳ ಸಂದರ್ಶನ ಒಳಗೊಂಡಿದೆ. ಅಲ್ಲದೇ ಕೇವಲ ಕೃತಿಯನ್ನು ಕೇವಲ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೀಮಿತಗೊಳಿಸದೇ ತಾಲೂಕಿನ ಎಲ್ಲಾ ಹಿಂದೂ ಧಾರ್ಮಿಕ ಕೇಂದ್ರಗಳ ಮಾಹಿತಿಯನ್ನು ಸೇರಿಸಿಕೊಳ್ಳಲಾಗಿದೆ. ಇದರೊಂದಿಗೆ ಸರಕಾರಿ ಕಚೇರಿಗಳು, ಜಿಲ್ಲಾ ಕಚೇರಿಗಳು, ಜನಪ್ರತಿನಿಧಿಗಳು, ಕಲ್ಯಾಣ ಮಂಟಪಗಳು, ತರಬೇತಿ ಕೇಂದ್ರಗಳು, ಶೈಕ್ಷಣಿಕ ಸಂಸ್ಥೆಗಳ ದೂರವಾಣಿ ನಂಬ್ರಗಳೂ ಒಳಗೊಂಡಿದ್ದು ಕೃತಿಗೆ ಇನ್ನಷ್ಟು ಮೆರಗು ನೀಡಿದೆ. ಇಂತಹ ಮಾಹಿತಿಗಳನ್ನೊಳಗೊಂಡ ಹೊತ್ತಗೆ ಬೇರೆಲ್ಲಿಯೂ ಇಲ್ಲ. ಇದೊಂದು ಸ್ವೀಕಾರಾರ್ಹ, ಸಂಗ್ರಹಯೋಗ್ಯವಾದ ಕೃತಿ ಎಂದರು. ಈ ಕೃತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕಾಯ್ದಿರಿಸಬೇಕಾದ ಜವಾಬ್ದಾರಿಯನ್ನು ವ್ಯವಸ್ಥಾಪನಾ ಸಮಿತಿ ಮಾಡಬೇಕಿದೆ. ೫೦೦ ವರ್ಷ ಕಳೆದರೂ ದೇವಸ್ಥಾನದಲ್ಲಿ ಇದರ ಪ್ರತಿ ಲಭ್ಯವಿರಬೇಕೆಂದು ಬಿ.ಜೆ.ಸುವರ್ಣ ಹೇಳಿದರು. ಸುದ್ದಿ ಮಾಹಿತಿ ಟ್ರಸ್ಟ್‌ನ ಮೂಲಕ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಶೈಕ್ಷಣಿಕ ಮಾಹಿತಿಯೂ ನೀಡಲಾಗುತ್ತಿದೆ. ಸರಿಯಾದ ಮಾಹಿತಿ ಒದಗಿಸುವುದು ಸುದ್ದಿ ಬಳಗದ ಅವಿಭಾಜ್ಯ ಅಂಗವಾಗಿದೆ. ಇದರ ಆಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದರದ್ದು ಪ್ರಯತ್ನಶೀಲ, ಪ್ರಯೋಗಶೀಲ ವ್ಯಕ್ತಿತ್ವ. ಯೋಚನೆಗಳನ್ನು ತಮಗೇ ಸೀಮಿತಗೊಳಿಸದೇ ಚರ್ಚಿಸಿ ಜಾರಿಗೊಳಿಸುತ್ತಿದ್ದಾರೆ. ‘ಸುದ್ದಿ’ಯಾಕೆ ಎನ್ನುತ್ತಿದ್ದವರು ಇಂದು ಸುದ್ದಿ ಬೇಕು ಎನ್ನುತ್ತಿದ್ದಾರೆ. ದೂರದ ದುಬೈನಲ್ಲಿರುವವರಿಗೂ ಮೊದಲು ಸುದ್ದಿ ನೋಡಬೇಕೆಂಬ ಬಯಕೆ ಹುಟ್ಟಿಕೊಂಡಿದೆ ಎಂದು ಬಿ.ಜೆ.ಸುವರ್ಣ ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುದ್ದಿ ಸಂಪದ ಕಾರ್ಯನಿರ್ವಾಹಕ ಸಂಪಾದಕ ಜ್ಯೋತಿಪ್ರಕಾಶ್ ಪುಣಚ, ಮನೆ, ಕುಲದೇವರಾಗಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಾರ‍್ಯಚಟುವಟಿಕೆಗಳನ್ನು ದಾಖಲಿಸಬೇಕೆಂಬ ಹಂಬಲದೊಂದಿಗೆ ದೇವಸ್ಥಾನದ ಸಹಕಾರದೊಂದಿಗೆ ಪುಸ್ತಕ ರಚನೆಗೊಂಡಿದೆ. ದೇವಸ್ಥಾನದ ಇತಿಹಾಸ, ಐತಿಹ್ಯ, ಸ್ಥಳ ಸಾನಿಧ್ಯ, ಬಹ್ರಕಲಶೋತ್ಸವ, ಜಾತ್ರೋತ್ಸವ ಕಾರ‍್ಯಕ್ರಮ, ಸಂದರ್ಶನಗಳನ್ನು ಪುಸ್ತಕ ಒಳಗೊಂಡಿದೆ. ಸುದ್ದಿ ಬಳಗದ ಅವಿರತ ಶ್ರಮದಿಂದ ಪುಸ್ತಕ ರೂಪುಗೊಂಡಿದೆ ಎಂದರು. ‘ಸುದ್ದಿ ಸಂಪದ’ ಉಪ ಸಂಪಾದಕಿ ಶ್ರೀಮತಿ ಶೋಭಾ ಶಿವಾನಂದ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸಿ.ಯು.ಪೂವಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನಗೌರವಾರ್ಪಣೆ: ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ.ಯು.ಪಿ.ಶಿವಾನಂದ ಹಾಗೂ ‘ಸುದ್ದಿ ಸಂಪದ’ ಉಪಸಂಪಾದಕರಾದ ಶ್ರೀಮತಿ ಶೋಭಾ ಶಿವಾನಂದರನ್ನು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ಶಾಲು ಹೊದಿಸಿ, ಮಲ್ಲಿಗೆ ಹಾರ ಹಾಕಿ, ಶ್ರೀ ಮಹಾಲಿಂಗೇಶ್ವರ ದೇವರ ಫೋಟೋ ಹಾಗೂ ಫಲಪುಷ್ಪ ನೀಡಿ ಸನ್ಮಾನಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರಿಗೆ ಹಾಗೂ ಕಾರ‍್ಯನಿರ್ವಹಣಾಧಿಕಾರಿ ಸಿ.ಯು.ಪೂವಪ್ಪರನ್ನು ಸುದ್ದಿ ಮಾಹಿತಿ ಟ್ರಸ್ಟ್‌ನ ಪರವಾಗಿ ಸನ್ಮಾನಿಸಲಾಯಿತು. ಇದೇ ವೇಳೆ ‘ಸುದ್ದಿ ಸಂಪದ’ರಚನೆಗೊಳ್ಳುವಲ್ಲಿ ಸಹಕರಿಸಿದ ಸುದ್ದಿ ಬಳಗವನ್ನು ಶಾಸಕಿ ಶಕುಂತಳಾ ಶೆಟ್ಟಿ ಗುಲಾಬಿ ಹೂ, ಸ್ಮರಣಿಕೆ ನೀಡಿ ಗೌರವಿಸಿದರು.

ಕೃತಿಯಿಂದ ಮುಂದಿನ ಜನಾಂಗಕ್ಕೆ ಅನುಕೂಲ: ಎನ್.ಕೆ. ಜಗನ್ನೀವಾಸ ರಾವ್

ಅನಿಸಿಕೆ ವ್ಯಕ್ತಪಡಿಸಿದ ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್, ದೇವಸ್ಥಾನದ ಜೀರ್ಣೋದ್ಧಾರದ ವೇಳೆ ಹಾಗೂ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ದೇವಸ್ಥಾನದ ಮುಖವಾಣಿ ಯಾಗಿ ‘ಸುದ್ದಿ ಬಿಡುಗಡೆ’ಪತ್ರಿಕೆ ಕೆಲಸ ನಿರ್ವಹಿಸಿದೆ. ಸ್ವಾರ್ಥ ಬಯಸದೇ ದಾನಿಗಳ ವಿವರವನ್ನೂ ಒಂದೇ ರೀತಿಯಲ್ಲಿ ಪ್ರಕಟಿಸಲಾಗಿತ್ತು. ಮುಂಬರುವ ಬಲ್ನಾಡು ದೇವಸ್ಥಾನದ ಬ್ರಹ್ಮಕಲಶೋತ್ಸವದ ವೇಳೆಯೂ ಇದೇ ರೀತಿಯ ಸಹಕಾರ ನೀಡಬೇಕೆಂದು ಹೇಳಿದರು. ಕರಸೇವಕ ಪ್ರಮುಖ್ ರಾಜೇಶ್ ಬನ್ನೂರು ಅನಿಸಿಕೆ ವ್ಯಕ್ತಪಡಿಸಿ, ದೇವಸ್ಥಾನದಲ್ಲಿ ನಡೆದ ಕರ ಸೇವೆ ಸೇರಿದಂತೆ ಇನ್ನಿತರ ಮಾಹಿತಿ ಪ್ರಕಟಿಸುವ ಮೂಲಕ ಜೀರ್ಣೋದ್ಧಾರ ಕಾರ‍್ಯಕ್ಕೆ ಸುದ್ದಿ ಬಳಗ ಬಹಳಷ್ಟು ಸಹಕಾರ ನೀಡಿದೆ. ಇದೀಗ ‘ಸುದ್ದಿ ಸಂಪದ’ ಲೋಕಾರ್ಪಣೆಗೊಳಿಸುವ ಮೂಲಕ ಬ್ರಹ್ಮಕಲಶೋತ್ಸವದ ಗತವೈಭವವನ್ನು ನೆನಪಿಸುವ ಕಾರ‍್ಯ ಮಾಡಿದೆ ಎಂದರು.

ಸುದ್ದಿ ಬಿಡುಗಡೆ ಪತ್ರಿಕೆ ಸಿಬ್ಬಂದಿಗಳಾದ ಚಂದ್ರಶೇಖರ ಉಮಿಗದ್ದೆ, ರಾಜೇಶ್ ಎಂ.ಎಸ್.ಮಾಡಾವು, ಕರುಣಾಕರ ರೈ ಸಿ.ಹೆಚ್., ಶೈಲಜಾ ಸುದೇಶ್, ಆದಿತ್ಯ ಈಶ್ವರಮಂಗಲ, ಜಯರಾಮ ಭಟ್ ಸಂಪಾಜೆ, ಚಂದ್ರಕಾಂತ್ ಉರ್ಲಾಂಡಿ, ಶ್ರೀಧರ್ ರೈ ಕೋಡಂಬು, ನಾರಾಯಣ ನಾಯ್ಕ್ ಅಮ್ಮುಂಜ ಅತಿಥಿಗಳನ್ನು ಹೂ ನೀಡಿ ಸ್ವಾಗತಿಸಿದರು. ಸುದ್ದಿ ಸಂಪದದ ಸಂಯೋಜಕ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಬನ್ನೂರು ಸ್ವಾಗತಿಸಿ, ಕಚೇರಿ ವರದಿಗಾರ್ತಿ ತೇಜಸ್ವಿ ಚಿಕ್ಕಪುತ್ತೂರು ವಂದಿಸಿದರು. ವ್ಯವಸ್ಥಾಪಕ ಉಮೇಶ್ ಮಿತ್ತಡ್ಕ ಕಾರ‍್ಯಕ್ರಮ ನಿರೂಪಿಸಿದರು. ಸುದ್ದಿ ಶಿಕ್ಷಣ ಮಾಹಿತಿ ವಿಭಾಗದ ಮೇನೇಜರ್ ಸುದರ್ಶನ್, ಯತೀಶ್ ಆಳ್ವ ಸಹಕರಿಸಿದರು. ಅರ್ಚಕ ಪ್ರೀತಂ ಪುತ್ತೂರಾಯ ಪ್ರಾರ್ಥಿಸಿದರು. ಸುದ್ದಿ ಶೈಕ್ಷಣಿಕ ಉದ್ಯೋಗ ಮಾಹಿತಿ ಪ್ರದರ್ಶನ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನ ದೇವಳದ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.

IMG-20140826-WA0004

IMG-20140826-WA0007

IMG-20140826-WA0010

IMG-20140826-WA0013

IMG-20140826-WA0052

IMG-20140826-WA0055

Picture 022 Picture 038 Picture 042 Picture 044 Picture 054 Picture 059 Picture 074 Picture 075 Picture 077 Picture 080 Picture 083 Picture 088 Picture 092 Picture 099

Leave a Reply


ಸುಭಾಷಿತ

ಧರ್ಮಗಳು ಆನಂದಗೊಳಿಸುವಂತಹ ದ್ವೀಪಗಳು,  ಆತ್ಮ ಮತ್ತು ಸ್ಪೂರ್ತಿಯ ತಾಣಗಳು.

– ಎ.ಪಿ.ಜೆ ಕಲಾಂ

ಚಿತ್ರ-ವಿಚಿತ್ರ

ಸುದ್ದಿ ಸ್ಪೆಷಲ್

Finding the right hotel just got a whole lot easier - HotelsCombined.com

ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಆರು ಪುಟಗಳಿಂದ
... ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

ಇಲ್ಲಿ ಕ್ಲಿಕ್ಕಿಸಿ

Copyright © 2018 Suddinews.com . All Rights Reserved.
^ Back to Top