Sat 14 Oct 2017, 3:14PM

ಹೆಚ್ಚಿನ ಸುದ್ದಿಗಳು

side advt

side advt

side advt

side advt

side advt

side advt

side advt

side advt

suddi whatsap news

ಗಡಿ ನಾಡಲ್ಲಿ ಚುನಾವಣೆಯ ಬಿಸಿ

Tuesday, May 10th, 2016 | sulliaeditor | no responses

ಬಿಸಿಲ ಬೇಗೆಯಿಂದ ನಾಡು ತತ್ತರಿಸುತ್ತಾ ಮಳೆಗಾಗಿ ದೇವರ ಮೊರೆ ಹೋಗುವುದು ಒಂದೆಡೆ. ಮತ್ತೊಂದೆಡೆ ದೇವರ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲೀಗ ಚುನಾವಣೆಯ ಬಿಸಿ ಏರಿದೆ.
ಸುಳ್ಯ ತಾಲೂಕಿಗೂ ಕೇರಳದ ಕಾಸರಗೋಡು ಜಿಲ್ಲೆಗೂ ಅವಿನಾಭಾವ ಸಂಬಂಧವಿದೆ. ಕಾಸರಗೋಡು ಜಿಲ್ಲೆಯ ಹಲವು ಗ್ರಾಮಗಳು ಸುಳ್ಯ ತಾಲೂಕಿನ ಗಡಿಗ್ರಾಮಗಳಾಗಿರುವುದು, ಇವರೆಲ್ಲಾ ವಾಣಿಜ್ಯ ಉದ್ದೇಶಗಳಿಗಾಗಿ ಸುಳ್ಯವನ್ನೆ ಅವಲಂಬಿಸಿರುವುದು ಇದಕ್ಕೆ ಮುಖ್ಯ ಕಾರಣ. ಕೋಲ್ಚಾರು – ಬಂದಡ್ಕ ರಸ್ತೆ ಅಭಿವೃದ್ಧಿಯಾದ ಮೇಲಂತೂ ಕೇರಳ ಮತ್ತಷ್ಟು ಹತ್ತಿರ. ಹಾಗಾಗಿ ಈ ಗಡಿಗ್ರಾಮಗಳಲ್ಲೂ ಚುನಾವಣೆಯ ಹವಾ ಜೋರಾಗಿದೆ. ಸುಳ್ಯ ತಾಲೂಕಿನ ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಹಲವು ನಾಯಕರು ಕೂಡಾ ಇಲ್ಲಿ ಮತ ಯಾಚನೆ ಮಾಡಿ ಬಂದಿದ್ದಾರೆ.
ಪ್ರಮುಖವಾಗಿ ಕಾಸರಗೋಡು ಜಿಲ್ಲೆಯ ಮೂರು ಗ್ರಾಮಗಳು ಸುಳ್ಯದ ಊರುಗಳೊಂದಿಗೆ ತಾಗಿಕೊಂಡಿದೆ. ಆಲೆಟ್ಟಿ ಬಡ್ಡಡ್ಕ ಮಾರ್ಗವಾಗಿ ಪ್ರಯಾಣಿಸಿದರೆ ಸಿಗುವುದು ಕಲ್ಲಪ್ಪಳ್ಳಿ. ಇದು ಪನತ್ತಡಿ ಗ್ರಾಮಕ್ಕೊಳಪಟ್ಟಿದ್ದು, ಕಾಂಞಂಗಾಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕೋಲ್ಚಾರು ಮೂಲಕ ಪ್ರಯಾಣಿಸಿದರೆ ಸಿಗುವುದು ಬಂದಡ್ಕ. ಇದು ಕುತ್ತಿಕೋಲು ಗ್ರಾಮದಲ್ಲಿದ್ದು, ಉದುಮ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಜಾಲ್ಸೂರು – ಕಾಸರಗೋಡು ಹೆದ್ದಾರಿಯಲ್ಲಿ ಪಂಜಿಕಲ್ಲಿನಿಂದ ಮುಂದೆ ಸಿಗುವುದು ಮುರೂರು. ಇದು ದೇಲಂಪಾಡಿ ಗ್ರಾಮಕ್ಕೆ ಬರುತ್ತದೆ. ದೇಲಂಪಾಡಿ ಗ್ರಾಮ ವಿಶಾಲವಾಗಿದ್ದು ಇದರ ಸರಹದ್ದು ಒಂದು ಕಡೆ ಮಂಡೆಕೋಲು ಗ್ರಾಮದಿಂದ ಆರಂಭಗೊಂಡು ಮತ್ತೊಂದೆಡೆ ಕನಕಮಜಲು ಗ್ರಾಮದವರೆಗೂ ಇದೆ. ದೇಲಂಪಾಡಿ ಗ್ರಾಮ ಕೂಡಾ ಉದುಮ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುತ್ತದೆ.

Untitled-1
ಈ ವಿಧಾನಸಭಾ ಕ್ಷೇತ್ರಗಳ ಬಗ್ಗೆ ಹೇಳುವ ಮೊದಲು ಕೇರಳದ ರಾಜಕಿಯ ಚಿತ್ರಣವನ್ನೂ ತಿಳಿದುಕೊಳ್ಳುವುದು ಅಗತ್ಯ. ೧೪೦ ವಿಧಾನಸಭಾ ಕ್ಷೇತ್ರಗಳಿರುವ ಕೇರಳದಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ಎಂಬ ಪ್ರಧಾನ ಒಕ್ಕೂಟಗಳಿದ್ದು, ಅನೇಕ ವರ್ಷಗಳಿಂದ ಇವೇ ಕೇರಳದ ಅಧಿಕಾರ ವಹಿಸಿಕೊಂಡಿದೆ. ವಿಶಿಷ್ಟವೆಂದರೆ ಐದು ವರ್ಷಗಳ ಅಧಿಕಾರ ಸಿಗುವ ಒಂದು ಒಕ್ಕೂಟಕ್ಕೆ ಮುಂದಿನ ಚುನಾವಣೆಯಲ್ಲಿ ಜನಾದೇಶ ಸಿಗದೆ ಅಧಿಕಾರ ಮತ್ತೊಂದು ಒಕ್ಕೂಟದ ಪಾಲಾಗುತ್ತದೆ. ಕೇರಳದ ರಾಜಕಾರಣದಲ್ಲಿ ಈಗ ನಿರ್ಣಾಯಕ ಶಕ್ತಿಯಾಗಿರುವ ಬಿ.ಜೆ.ಪಿ. ಕೂಡಾ ಈ ಬಾರಿ ಎನ್.ಡಿ..ಎ. ಒಕ್ಕೂಟದ ಮೂಲಕವೇ ಸ್ಪರ್ಧಿಸುತ್ತಿದೆ.
ಇಂಡಿಯನ್ ನ್ಯಾಶನಲ್ ಕಾಂಗ್ರೆಸ್, ಕೇರಳ ಕಾಂಗ್ರೆಸ್ ಮಾಣಿ , ಆರ್.ಎಸ್.ಪಿ., ಜೆಡಿಯು, ಐ.ಯು.ಎಂ.ಎಲ್, ಸೋಷಲಿಸ್ಟ್ ಜನತಾದಳ್, ಮೊದಲಾದ ಪಕ್ಷಗಳು ಯು.ಡಿ.ಎಫ್. ಭಾಗವಾದರೆ, ಸಿಪಿಎಂ, ಸಿಪಿಐ, ಜನತಾದಳ್ , ಕೇರಳ ಕಾಂಗ್ರೆಸ್ ಬಿ, ಕೇರಳ ಕಾಂಗ್ರೆಸ್ ಡಿ, ಎನ್.ಸಿ.ಪಿ. , ಕೇರಳ ಕಾಂಗ್ರೆಸ್ ಎಸ್ ಪಕ್ಷಗಳು ಎಲ್.ಡಿ.ಎಪ್. ಭಾಗವಾಗಿದೆ. ಎನ್.ಡಿ.ಎ. ಯಲ್ಲಿ ಬಿಜೆಪಿ ಅಲ್ಲದೆ ಇತ್ತೀಚೆಗಷೇ ಅಸ್ತಿತ್ವಕ್ಕೆ ಬಂದ ಎಸ್.ಎನ್.ಡಿ.ಪಿ. ಮುಖಂಡ ವೆಳ್ಳಾಪಳ್ಳಿ ನಟೇಶನ್ ಅವರ ಭಾರತ್ ಧರ್ಮ ಜನ ಸೇನಾ ಪಕ್ಷ ಮತ್ತು ಆದಿವಾಸಿ ನೇತಾರೆ ಸಿ.ಕೆ.ಜಾನು ಅವರ ಜನಾಧಿಪತ್ಯ ರಾಷ್ಟ್ರೀಯ ಸಭಾ ಪಕ್ಷಗಳು ಗುರುತಿಸಿಕೊಂಡಿದೆ. ಕೆಲವು ಸಣ್ಣ ಸಣ್ಣ ಪಕ್ಷಗಳು ಒಂದೊಂದು ಚುನಾವಣೆಯಲ್ಲಿ ಒಂದೊಂದು ಒಕ್ಕೂಟದೊಂದಿಗೆ ಗುರುತಿಸಿಕೊಳ್ಳುತ್ತಾ , ಅವಕಾಶವಾದಿ ರಾಜಕಾರಣ ಮಾಡುತ್ತಾ ರಾಜಕೀಯ ಲಾಭ ಪಡೆದುಕೊಳ್ಳುವುದು ಇಲ್ಲಿ ಮಾಮೂಲು.
ಕಾಞಂಗಾಡು ವಿಧಾನಸಭಾ ಕ್ಷೇತ್ರ ಪರಂಪರಾನುಗತವಾಗಿ ಎಲ್.ಡಿ.ಎಫ್. ನೊಂದಿಗೆ ಗುರುತಿಸಿಕೊಂಡಿದೆ. ಈ ಹಿಂದೆ ಇದು ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಕಳೆದ ಚುನಾವಣೆಯಲ್ಲಿ ಮೀಸಲಾತಿ ತೆರವುಗೊಂಡು ಜನರಲ್ ಆಗಿತ್ತು. ಎಲ್.ಡಿ.ಎಫ್. ನ ಅಂಗ ಪಕ್ಷವಾದ ಸಿಪಿಐನ ನಾಯಕ ಇ.ಚಂದ್ರಶೇಖರನ್ ನಾಯರ್ ಇಲ್ಲಿ ಗೆಲುವು ಸಾಧಿಸಿದ್ದರು. ಚಂದ್ರಶೇಖರನ್ ನಾಯರ್ ೬೬೬೪೦ ಮತಗಳನ್ನು ಪಡೆದಿದ್ದರೆ, ಯುಡಿಎಪ್‌ನ ಎಂ.ಸಿ.ಜೋಸ್ ೫೪೪೬೨ ಮತ ಹಾಗೂ ಬಿಜೆಪಿಯ ಮಡಿಕೈ ಕಮ್ಮಾರನ್ ೧೫೫೪೩ ಮತ ಪಡೆದಿದ್ದರು. ಎಲ್.ಡಿ.ಎಫ್. ನಿಂದ ಈ ಬಾರಿಯೂ ಚಂದ್ರಶೇಖರನ್ ಅವರೇ ಸ್ಪರ್ಧಿಸುತ್ತಿದ್ದು, ಯುಡಿಎಫ್ ನಿಂದ ಶ್ರೀಮತಿ ಧನ್ಯಾ ಸುರೇಶ್ ಕಣದಲ್ಲಿದ್ದಾರೆ. ಎನ್‌ಡಿಎ ಅಭ್ಯರ್ಥಿಯಾಗಿ ಭಾರತೀಯ ಧರ್ಮ ಜನ ಸೇನಾದ ರಾಘವನ್ ಕಣದಲ್ಲಿದ್ದಾರೆ.
ಉದುಮ ವಿಧಾನಸಭಾ ಕ್ಷೇತ್ರದಲ್ಲೂ ಎಲ್.ಡಿ.ಎಫ್. ಹಿಡಿತವೇ ಇದೆ. ಒಂದು ಕಾಲದಲ್ಲಿ ಇಲ್ಲಿ ಯುಡಿಎಫ್ ಗೆಲುವು ಸಾಧಿಸಿದ್ದು ಬಳಿಕದ ನಿರಂತರ ಚುನಾವಣೆಗಳಲ್ಲಿ ಎಲ್.ಡಿ.ಎಫ್. ನದೇ ಪಾರುಪತ್ಯ. ಕಳೆದ ಚುನಾವಣೆಯಲ್ಲಿ ಎಲ್.ಡಿ.ಎಫ್ ನ ಕುಂಞಿರಾಮನ್ 61646, ಯುಡಿಎಫ್‌ನ ಸಿ.ಕೆ.ಶ್ರೀಧರನ್ 5೦266, ಹಾಗೂ ಬಿಜೆಪಿಯ ಸುನಿತಾ ಪ್ರಶಾಂತ್ 13೦73 ಮತಗಳನ್ನು ಪಡೆದಿದ್ದರು. ಹಾಲಿ ಶಾಸಕ ಕುಂಞಿರಾಮನ್ ಈ ಬಾರಿಯೂ ಎಲ್.ಡಿ.ಎಫ್ ಹುರಿಯಾಳು. ಯುಡಿಎಫ್ ಅಭ್ಯರ್ಥಿಯಾಗಿ ಕಣ್ಣೂರಿನ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಕೆ.ಸುಧಾಕರನ್ ಸ್ಪರ್ಧಿ . ಸುಧಾಕರನ್ ಕೇರಳದ ಪ್ರಭಾವಿ ಮುಖಂಡರಾಗಿರುವುದು ಈ ಬಾರಿಯ ಚುನಾವಣೆಯ ಕಣವನ್ನು ರಂಗಾಗಿಸಿದೆ. ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವ, ಸುಳ್ಯದೊಂದಿಗೆ ನಿಕಟ ಸಂಪರ್ಕ ಇರಿಸಿಕೊಂಡಿರುವ ನ್ಯಾಯವಾದಿ ಶ್ರೀಕಾಂತ್ ಇಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದು, ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕಾಸರಗೋಡು ವಿಧಾನಸಭಾ ಕ್ಷೇತ್ರಕ್ಕೆ ನೇರವಾಗಿ ಸುಳ್ಯಕ್ಕೆ ಭೌಗೋಳಿಕ ಸಂಬಂಧಗಳಿಲ್ಲ. ಆದರೆ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಕುಂಟಾರು ರವೀಶ್ ತಂತ್ರಿಯವರು ಸುಳ್ಯದ ಪಾಲಿಗೆ ಪರಿಚಿತ ಹೆಸರು. ಹಲವು ದೇಗುಲಗಳ ತಂತ್ರಿಯಾಗಿ, ಉತ್ತಮ ವಾಗ್ಮಿಯಾಗಿ, ಹಿಂದೂ ಪರ ಪ್ರಬಲ ಹೋರಾಟಗಾರಾಗಿ ಮುಂಚೂಣಿಯಲ್ಲಿದ್ದ ರವೀಶ್ ತಂತ್ರಿಯವರು ಕೇರಳ ರಾಜ್ಯ ಹಿಂದೂ ಐಕ್ಯವೇದಿಯ ಉಪಾಧ್ಯಕ್ಷರಾಗಿದ್ದರು. ಹಿಂದೂ ಐಕ್ಯವೇದಿಯ ಅಧ್ಯಕ್ಷರಾಗಿದ್ದ ಕುಮ್ಮನಂ ರಾಜಶೇಖರನ್ ಈಗ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು, ಸಹಜವಾಗಿಯೇ ಕಾಸರಗೋಡು ಕ್ಷೇತ್ರದಿಂದ ರವೀಶ್ ತಂತ್ರಿಯವರಿಗೆ ಟಿಕೆಟ್ ಲಭಿಸಿದೆ. ಈ ಕ್ಷೇತ್ರ ಪರಂಪರಾನುಗತವಾಗಿ ಯು.ಡಿ.ಎಫ್. ಹಿಡಿತದಲ್ಲಿದೆ. ಹಾಲಿ ಶಾಸಕ ಎನ್.ಎ.ನೆಲ್ಲಿಕುನ್ನು ಇಲ್ಲಿ ಯುಡಿಎಫ್ ಅಭ್ಯರ್ಥಿಯಾಗಿ ಕಣದಲ್ಲಿದ್ದರೆ, ಅಮೀರ್ ಎಲ್.ಡಿ.ಎಫ್. ಅಭ್ಯರ್ಥಿ.
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯೂ ಸುಳ್ಯದ ಪಾಲಿಗೆ ಪರಿಚಿತರೇ. ಇಲ್ಲಿನ ಚುನಾವಣಾ ಪ್ರಚಾರ ಸಭೆಗಳಲ್ಲಿ ಕಾಣಿಸಿಕೊಳ್ಳುವ ಕೇರಳದ ಬಿಜೆಪಿ ಮುಖಂಡ ಸುರೇಂದ್ರನ್ ಇಲ್ಲಿ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಗೆಲುವು ಒಂದೇ ಒಕ್ಕೂಟಕ್ಕೆ ಸೀಮಿತವಲ್ಲ. ಒಂದು ಬಾರಿ ಎಲ್.ಡಿ.ಎಫ್. ಗೆದ್ದರೆ ಮತ್ತೊಂದು ಬಾರಿ ಯುಡಿಎಫ್ ಗೆಲ್ಲುತ್ತದೆ. ಯುಡಿಎಫ್ ನ ಅಬ್ದುಲ್ ರಜಾಕ್ ಇಲ್ಲಿ ಹಾಲಿ ಶಾಸಕರಾಗಿದ್ದು, ಇವರೇ ಈ ಬಾರಿಯೂ ಅಭ್ಯರ್ಥಿ . ಮಾಜಿ ಶಾಸಕ ಸಿ.ಎಚ್. ಕುಂಞಂಬು ಎಲ್.ಡಿ.ಎಫ್ ಅಭ್ಯರ್ಥಿ.
ವಿಶೇಷವೆಂದರೆ ಕಾಸರಗೋಡು ಹಾಗೂ ಮಂಜೇಶ್ವರ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ದ್ವಿತೀಯ ಸ್ಥಾನಿಯಾಗಿದ್ದರು. ಯು.ಡಿ.ಎಫ್. ಅಭ್ಯರ್ಥಿಗಳ ಗೆಲುವಿನ ಅಂತರ ಕಾಸರಗೋಡಿನಲ್ಲಿ 9738 ಮತ್ತು ಮಂಜೇಶ್ವರದಲ್ಲಿ 5828 . ಹೀಗಾಗಿಯೇ ಈ ಬಾರಿ ಬಿಜೆಪಿ ಗೆಲುವು ನಿರೀಕ್ಷಿಸುವ ಕ್ಷೇತ್ರಗಳ ಪೈಕಿ ಇವೆರಡೂ ಮುಖ್ಯವಾಗಿದೆ.
ಚುನಾವಣಾಪೂರ್ವ ಸಮೀಕ್ಷೆಗಳ ಪ್ರಕಾರ ಈ ಬಾರಿ ಕೇರಳದಲ್ಲಿ ಎಲ್.ಡಿ.ಎಫ್. ಅಧಿಕಾರ ಹಿಡಿಯುತ್ತದೆ. ಐದು ವರ್ಷ ಆಡಳಿತ ನಡೆಸಿದ ಯುಡಿಎಫ್ ಮೇಲೆ ಸೋಲಾರ್ ಹಗರಣ, ಬಾರ್ ಲಂಚ ಹಗರಣ ಸೇರಿದಂತೆ ಹಲವು ಗುರುತರ ಆರೋಪಗಳಿವೆ. ಎಲ್.ಡಿ.ಎಫ್ ಗೆದ್ದರೆ ಮುಖ್ಯಮಂತ್ರಿ ಗಾದಿಗೆ ವಿ.ಎಸ್.ಅಚ್ಚುತಾನಂದನ್ ಹಾಗೂ ಪಿಣರಾಯಿ ವಿಜಯನ್ ಅವರ ನಡುವೆ ಗುದ್ದಾಟ ನಡೆಯುವುದು ನಿಶ್ಚಿತ. ಈ ವರೆಗಿನ ಚುನಾವಣೆಗಳಲ್ಲಿ ಕೇರಳದಲ್ಲಿ ಅಕೌಂಟ್ ತೆರೆಯುತ್ತೇವೆ ಎಂದು ಹೇಳಿಕೊಂಡು ಬಂದ ಬಿಜೆಪಿ ಈ ಬಾರಿ ಬ್ಯಾಂಕನ್ನೇ ತೆರೆಯುವುದಾಗಿ ಹೇಳಿಕೊಳ್ಳುತ್ತಿದೆ. ಕೇಂದ್ರದಲ್ಲಿ ಎನ್.ಡಿ.ಎ. ಸರಕಾರವಿರುವುದು, ಚಲನಚಿತ್ರ ನಟ ಸುರೇಶ್ ಗೋಪಿ ಅವರಿಗೆ ರಾಜ್ಯ ಸಭಾ ಸೀಟು ನೀಡಿರುವುದು ಇವೆಲ್ಲಾ ತಮಗೆ ಪ್ಲಸ್ ಆಗಬಹುದೆಂಬ ಲೆಕ್ಕಾಚಾರ ಅವರದು. ಅಂದ ಹಾಗೆ, ಮೇ ೧೬ಂದು ಕೇರಳದಲ್ಲಿ ಇಲೆಕ್ಷನ್, ಮೇ 19ರಂದು ಕೌಂಟಿಂಗ್.
– ನಾಯರ್‌ಕೆರೆ

Leave a Reply


ನಮ್ಮ ಬಗ್ಗೆ

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಸುಳ್ಯ ತಾಲೂಕಿನ “ಸುದ್ದಿ ಬಿಡುಗಡೆ “ಪತ್ರಿಕೆ ಇಂದು ಪ್ರತಿದಿನ  24
ಮುಂದೆ ಓದಿ

ಸಲಹೆ- ಸೂಚನೆ

ನಿಮ್ಮ ಸಲಹೆ ಸೂಚನೆಗಳಿಗೆ ಹಾರ್ದಿಕ ಸ್ವಾಗತ

Copyright © 2017 . All Rights Reserved.
^ Back to Top